ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಬೈಲ್ ಸಮೀಪದ ಗಣಪು ಹೆಗಡೆ ಎನ್ನುವವರ ಮನೆಯ ಅಂಗಳಕ್ಕೆ ಶನಿವಾರ ಮುಂಜಾನೆ ಚಿರತೆಯೊಂದು ಆಗಮಿಸಿರುವ ಘಟನೆ ನಡೆದಿದೆ.
ಮನೆಯಂಗಳದಲ್ಲಿದ್ದ ನಾಯಿಯನ್ನ ಬೇಟೆಯಾಡಲು ಆಗಮಿಸಿದ ಚಿರತೆ, ನಾಯಿಯ ಮೇಲೆ ದಾಳಿ ಮಾಡಿರುವ ದೃಶ್ಯ ಮನೆಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಶನಿವಾರ ಮುಂಜಾನೆ 4.20ರ ಸುಮಾರಿಗೆ ಈ ಘಟನೆ ನಡೆದಿದ್ದು, ನಾಯಿ ಒಂದೇ ಸಮನೆ ಕೂಗಿದ್ದರಿಂದ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಸ್ಥಳದಿಂದ ಚಿರತೆ ಪರಾರಿಯಾಗಿದೆ.
ಇತ್ತೀಚಿನ ದಿನದಲ್ಲಿ ಹೊಸಾಕುಳಿ, ಸಾಲ್ಕೋಡ್ ಗ್ರಾಮದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದರು. ಬೋನ್ ಒಳಗೆ ಚಿರತೆ ಹೋಗದೆ ತಪ್ಪಿಸಿಕೊಂಡಿತ್ತು. ಇದೀಗ ಮತ್ತೆ ಚಿರತೆ ಕಾಟ ವಿಪರೀತವಾಗಿದ್ದು, ಸಾಕುಪ್ರಾಣಿಯಾದ ಆಕಳು, ನಾಯಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಿಪಿಐ ಶ್ರೀಧರ ಎಸ್.ಆರ್., ಹೊಸಾಕುಳಿ ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ ಸಾಲ್ಕೋಡ್, ಗ್ರಾ.ಪಂ. ಪಿಡಿಓ ಈರಪ್ಪ ಲಂಬಾಣಿ, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಕಾಟ ದೂರವಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.