Slide
Slide
Slide
previous arrow
next arrow

ಪಿ.ವಿ.ಹಾಸ್ಯಗಾರ ಸಂಸ್ಮರಣೆ ಪ್ರಶಸ್ತಿಗೆ ರಾಘವ ನಂಬಿಯಾರ ಆಯ್ಕೆ

300x250 AD

ಹೊನ್ನಾವರ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರ ಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ.ಪಿ.ವಿ.ಹಾಸ್ಯಗಾರ ಕರ್ಕಿ ಇವರ ನೆನಪಿನಲ್ಲಿ ಕೊಡಮಾಡುವ 2022ರ ಪ್ರಶಸ್ತಿಗೆ ಬಹುಶ್ರುತ ವಿದ್ವಾಂಸ, ಯಕ್ಷಗಾನ ಸಂಶೋಧಕ, ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಂ.ರಾಘವ ನಂಬಿಯಾರರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50,001 ರೂಪಾಯಿ, ಸ್ಮರಣಿಕೆ ಮತ್ತು ಇತರ ಸುವಸ್ತುಗಳನ್ನು ಒಳಗೊಂಡಿದೆ.
ಇದೇ ಡಿಸೆಂಬರ್ 31 ಶನಿವಾರದಂದು ಮಧ್ಯಾಹ್ನ 4.00 ಗಂಟೆಗೆ ಕರ್ಕಿಯ ಹವ್ಯಕ ಸಭಾಭವನದಲ್ಲಿ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ. ಪ್ರತಿವರ್ಷದಂತೆ ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ, ಕಡತೋಕ ಕೃಷ್ಣ ಭಾಗವತ, ಪಿ.ವಿ.ಹಾಸ್ಯಗಾರ ಸಂಸ್ಮರಣಾ ವೇದಿಕೆ, ಹೆಬ್ಳೇಕೆರಿ (ಕಡತೋಕ), ಯಕ್ಷರಂಗ ಪತ್ರಿಕಾ ಬಳಗ, ಹಳದೀಪುರ, ಸಿರಿಕಲಾ ಮೇಳ, ಬೆಂಗಳೂರು ಮತ್ತು ಕರ್ಕಿ ಹಾಸ್ಯಗಾರ ಕುಟುಂಬದವರ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭವನ್ನು ಪಿ ವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈ ವರ್ಷವೂ ಹಮ್ಮಿಕೊಂಡಿದ್ದಾರೆ. ನಾಡಿನ ಖ್ಯಾತ ಪತ್ರಿಕೋದ್ಯಮ ತಜ್ಞ, ಲೇಖಕ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ಕೋಲಾರ) ಕುಲಪತಿ ಡಾ. ನಿರಂಜನ ವಾನಳ್ಳಿ ಅಧ್ಯಕ್ಷತೆ ವಹಿಸಿಲಿದ್ದಾರೆ. ಯಕ್ಷಗಾನ ವಿಮರ್ಶಕ, ಬರಹಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿ ಮತ್ತು ಪರಿಸರ ವಿಜ್ಞಾನಿ ಡಾ. ಪ್ರಕಾಶ ಭಟ್ (ಧಾರವಾಡ) ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ಜಿ. ಎಲ್. ಹೆಗಡೆ, ಕುಮಟಾ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಡಾ. ಜಿ. ಕೆ. ಹೆಗಡೆ, ಹರಿಕೇರಿ ಹಿರಿಯ ಕಲಾವಿದರ ಸಂಸ್ಮರಣೆ ಮಾಡಲಿದ್ದಾರೆ. ಕಡತೋಕ ಗೋಪಾಲಕೃಷ್ಣ ಭಾಗವತ (ಯಕ್ಷರಂಗ) ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ.
ಸಭಾಕಾರ್ಯಕ್ರಮದ ನಂತರ ಪ್ರಸಿದ್ಧ, ನುರಿತ ತೆಂಕುತಿಟ್ಟು ಯಕ್ಷಗಾನ ಕಲಾವಿದರಿಂದ ನರಕಾಸುರ ವಧೆ ಮತ್ತು ಗರುಡ ಗರ್ವಭಂಗ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ. ತೆಂಕು ಮತ್ತು ನಡುಬಡಗು ತಿಟ್ಟುಗಳಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿ ಯಕ್ಷಗಾನ ವಲಯದಲ್ಲಿ ಚಿರಪರಿಚಿತರಾಗಿರುವ ಡಾ.ರಾಘವ ನಂಬಿಯಾರರು ತಮ್ಮ ಇಳಿವಯಸ್ಸಿನಲ್ಲಿ ಉತ್ತರ ಕನ್ನಡದ ಸಭಾಹಿತ ಮಟ್ಟಿನ (ಬಡಾಬಡಗು ತಿಟ್ಟು) ಆಳವಾದ ಅಧ್ಯಯನ ಮತ್ತು ದಾಖಲೀಕರಣದಲ್ಲಿ ತೊಡಗಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖನೀಯ. ಬಡಾಬಡಗಿನ ಯಕ್ಷಗಾನದ ತವರೂರಿನೋಪಾದಿಯಲ್ಲಿ ಇದ್ದ ಕರ್ಕಿಯಲ್ಲಿ, ಕರ್ಕಿ ಮೇಳದ ಶ್ರೇಷ್ಠ ಕಲಾವಿದ ಮತ್ತು ತಮ್ಮ ಪರಂಪರೆಗೆ ನಿಷ್ಠರಾಗಿದ್ದ ದಿ. ಪಿ.ವಿ.ಹಾಸ್ಯಗಾರರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿಯನ್ನು ಡಾ.ನಂಬಿಯಾರರು ಪಡೆಯುತ್ತಿರುವುದು ವಿಶೇಷತೆಯನ್ನು ಪಡೆದಿದೆ.
ಕಡತೋಕ ಕೃಷ್ಣ ಭಾಗವತ, ಪಿ.ವಿ.ಹಾಸ್ಯಗಾರ, ಧರ್ಮಶಾಲಾ ಮಹಾಬಲೇಶ್ವರ ಭಟ್ ಸಂಸ್ಮರಣಾ ವೇದಿಕೆ, ಹೆಬ್ಳೇಕೆರಿ (ಕಡತೋಕ) ಇದರ ವತಿಯಿಂದ ಹಲವು ದಶಕಗಳ ಕಾಲ ವಾರ್ಷಿಕವಾಗಿ ನಡೆಸುತ್ತಾ ಬಂದಿರುವ ಸನ್ಮಾನ ಕಾರ್ಯಕ್ರಮವನ್ನು ಈ ವರ್ಷ ಇದೇ ವೇದಿಕೆಯಲ್ಲಿ ನಡೆಸಲಾಗುವುದು. ಹಿರಿಯ ಕಲಾವಿದರಾದ ಕವಾಳೆ ಗಣಪತಿ ಭಾಗವತ, ಶ್ರೀ ಶ್ರೀಧರ ಹೆಗಡೆ, ನಕ್ಷೆ ಮತ್ತು ಹಣಜಿಬೈಲ್ ಪ್ರಭಾಕರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top