ಹಳಿಯಾಳ: ಹಲವಾರು ಸರಕಾರದ ಯೋಜನೆ ಮತ್ತು ಸೇವೆಗಳು ಕರ್ನಾಟಕ ಒನ್ ಕೇಂದ್ರದ ಒಂದೇ ಸೂರಿನಡಿ ಲಭ್ಯವಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಬಸ್ ನಿಲ್ದಾಣದ ಎದುರಿಗೆ ಇರುವ ಕೊರವೇಕರ ಕಟ್ಟಡದಲ್ಲಿ ಸ್ಥಾಪಿಸಲಾದ ಕರ್ನಾಟಕ ಒನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಕಚೇರಿ ಅಲೆದಾಡುವುದು ಇದರಿಂದ ತಪ್ಪುತ್ತದೆ. ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಂಬಂಧಿಸಿದ ಕಚೇರಿಗೆ ಹೋಗುತ್ತದೆ. ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಯು ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಕೊಂಡು ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸಿ ಪ್ರಮಾಣ ಪತ್ರಗಳನ್ನು ಕರ್ನಾಟಕ ಒನ್ ಕೇಂದ್ರದಲ್ಲಿ ಪಡೆಯಬಹುದು ಎಂದರು.
ಇದೇ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಲೇಬರ್ ಕಾರ್ಡ್ ನವೀಕರಣ ಮತ್ತು ಆರ್‌ಸಿ ಎಕ್ಸ್ಟ್ರಾಕ್ಟ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರೀಕಟ್ಟಿ, ತಹಶೀಲ್ದಾರ ಆರ್.ವಿ.ಕಟ್ಟಿ, ತಹಶೀಲ್ದಾರ ಗ್ರೇಡ್-2 ಜೆ.ಕೆ.ರತ್ನಾಕರ, ಕರ್ನಾಟಕ ಒನ್ ಕೋ- ಆರ್ಡಿನೇಟರ್ ಆರತಿ ಖಾಂದಳಕರ್, ವ್ಯವಸ್ಥಾಪಕ (ಇಡಿಸಿಎಸ್) ಅನೀಶ್ ಶೇಖ್ ಹಾಗೂ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.