ಶಿರಸಿ :ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಯಾವುದೇ ರೀತಿಯ ವೈಮನಸ್ಸು,ಜಿದ್ದನ್ನು ಬೆಳೆಸಿಕೊಳ್ಳದೇ ಉತ್ತಮ ಸ್ನೇಹ ಮನೋಭಾವದೊಂದಿಗೆ ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ನಗರದ ರಾಮನಬೈಲ ಗೆಳೆಯರ ಬಳಗ ಹಾಗೂ ಈಗಲ್, ಕ್ಲಾಸಿಕ್ ರಾಮನಬೈಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಖೊಡ್ಡಾ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ನಂತರ ಮಾತನಾಡಿ, ವಿದ್ಯಾರ್ಥಿ ಜೀವನ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯ, ನಿರಂತರವಾಗಿ ಭಾಗವಹಿಸಲು ಅಪೂರ್ವ ಅವಕಾಶ ಒದಗಿಸುವ ಒಂದು ಸುವರ್ಣ ಘಟ್ಟವಾಗಿದೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದು, ಕಲಿಕೆಯ ಬಗೆಗೂ ಗಮನಹರಿಸಿ, ಸಮಯ ನೀಡಬೇಕಾದ್ದದು ಅತ್ಯವಶ್ಯಕ. ಕ್ರಿಕೆಟ್‌ಗೆ ನೀಡುವಂತಹ ಪ್ರಾಶಸ್ತ್ಯ ವಾಲಿಬಾಲ್‌ಗೂ ನೀಡಬೇಕಿದ್ದು, ಈ ಆಟಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದರು.
ಕ್ರೀಡೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕತೆ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕರು ನಾಯಕತ್ವವನ್ನು ಬೆಳೆಸಿಕೊಳ್ಳಬಹುದು. ಇದರಿಂದ ಸಂಘಟನೆ ರೂಪುಗೊಳ್ಳಲು ನೆರವಾಗುತ್ತದೆ ಹಾಗೂ ಮೊಬೈಲ್, ಟಿವಿಯಿಂದ ಇಂದಿನ ಗ್ರಾಮೀಣ ಭಾಗದ ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ನಮಗೆ ತಿಳಿಯದೇ ವಿಷಯುಕ್ತ ಆಹಾರ ಸೇವನೆ ಮಾಡುತ್ತಿದ್ದಾರೆ. ಕ್ರೀಡೆ ದೇಹದ ರಕ್ಷಣೆಗೆ ಮಾರ್ಗಸೂಚಿ ನೀಡುತ್ತದೆ. ಉತ್ತಮ ಆಹಾರದ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಕ್ಕಳು ಕೇವಲ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಬಾರದು. ಇದರೊಂದಿಗೆ ಕ್ರೀಡೆಗೂ ಸಹ ಆಸಕ್ತಿ ತೋರಬೇಕು. ಹಾಗೆಂದು ಶಿಕ್ಷಣವನ್ನು ನಿರ್ಲಕ್ಷಿಸಿ ಕೇವಲ ಕ್ರೀಡೆಯಲ್ಲಿ ಮಾತ್ರ ಆಸಕ್ತಿ ಹೊಂದಿದರೂ ಸಹ ಪ್ರಯೋಜನವಿಲ್ಲ. ಬದಲಾಗಿ ಎರಡರಲ್ಲೂ ಸಮಾನ ಆಸಕ್ತಿ ಹೊಂದಿ ಶ್ರಮವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ ( ಗಣು) ಆದರ್ಶ ನಾಯ್ಕ. ಅಪಾರ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು, ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು