ಸಿದ್ದಾಪುರ: 1960ರಲ್ಲಿ ಆರಂಭಗೊಂಡ ತಾಲೂಕಿನ ಇಟಗಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಡಿ.3ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಸಚಿವ ಶಿವರಾಮ ಹೆಬ್ಬಾರ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ.ಶಾಸ್ತ್ರೀ, ಸಹಕಾರ ಸಂಘಗಳ ಉಪ ನಿಬಂಧಕ ಟಿ.ವಿ.ಶ್ರೀನಿವಾಸ, ಹಿರಿಯ ನ್ಯಾಯವಾದಿ ಜೆ.ಎಸ್.ಹೆಗಡೆ ಬೆಳ್ಳೆಮಡಿಕೆ,ರಾಮೇಶ್ವರ ದೇವಾಲಯದ ಮೊಕ್ತೇಸರ ಚಂದ್ರಶೇಖರ ಎಂ.ಹೆಗಡೆ, ಗ್ರಾಪಂ ಅಧ್ಯಕ್ಷ ಸುರೇಶ ಮಡಿವಾಳ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಗುವದು ಎಂದರು.
ಸಂಘವು 6 ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 1335 ಸದಸ್ಯರುಗಳಿದ್ದಾರೆ. ಚಿಕ್ಕ, ಅತಿ ಚಿಕ್ಕ ಹಿಡುವಳಿದಾರರು ಹೆಚ್ಚಿರುವ ಕಾರಣ ವ್ಯಾವಹಾರಿಕವಾಗಿ ಸಂಘವು ಸಧೃಡವಾಗಿರಲಿಲ್ಲ. 2005ರಿಂದ 4 ವರ್ಷ ಹಾನಿಯನ್ನೂ ಅನುಭವಿಸಿತ್ತು. ಈಗ ಸಂಘವು ನಿವ್ವಳ ಲಾಭ ಗಳಿಸುವ ಹಂತಕ್ಕೆ ಬಂದಿದೆ.
ಚಿಕ್ಕದಾದ ಕಟ್ಟಡದಲ್ಲಿ ಈವರೆಗೆ ಕಾರ್ಯನಿರ್ವಹಿಸುತ್ತಿದ್ದು ಈಗ 50 ಲಕ್ಷ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಮೊದಲಿನ ಕಟ್ಟಡದಲ್ಲಿ ಕೃಷಿ ಮತ್ತು ಕಿರಾಣಿ ಸುಪರ್ ಮಾರ್ಕೆಟ್ ಆರಂಭಿಸಲು ಯೋಜಿಸಲಾಗಿದೆ. ವಿಸ್ತಾರವಾದ ವ್ಯಾಪ್ತಿ ಇರುವ ಕಾರಣ ಪಡಿತರ ವಿತರಣೆ ಮುಂತಾಗಿ ದೂರದ ಸದಸ್ಯರುಗಳ ಅನುಕೂಲಕ್ಕೆ ಬೈಲಳ್ಳಿಯಲ್ಲಿ ಸಂಘದ ಶಾಖೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಸಂಘದ ವ್ಯವಹಾರದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ಕಟ್ಟಡದಲ್ಲಿ ಲಾಕರ್ ವ್ಯವಸ್ಥೆ ಇದ್ದು ಮುಂದಿನ ದಿನಗಳಲ್ಲಿ ಬಂಗಾರ ದಾಗಿನೆ ಸಾಲ ನೀಡಲು ಉದ್ದೇಶಿಸಲಾಗಿದೆ. ಈ ಸಂದರ್ಭದಲ್ಲಿ ಮರಣೋತ್ತರ ನಿಧಿ ಹಾಗೂ ಸದಸ್ಯರ ಕಲ್ಯಾಣ ನಿಧಿ ಸ್ಥಾಪಿಸಲಾಗುತ್ತಿದೆ. ಸಂಘದ ನಿರ್ದೇಶಕರ ಮತ್ತು ಸಿಬ್ಬಂದಿಗಳ ದಕ್ಷತೆ, ನಿಷ್ಠೆಗಳಿಂದ ಸಂಘವು ಅಭಿವೃದ್ಧಿಗೊಳ್ಳುತ್ತಿದೆ ಎಂದರು. ಸಂಘದ ನಿರ್ದೇಶಕರಾದ ಮಂಜುನಾಥ ಹೆಗಡೆ ಹೊನ್ನೆಮಡಿಕೆ, ರಮಾನಂದ ನಾಯ್ಕ ಹರಗಿ, ವಿನಾಯಕ ಭಟ್ಟ ಅಡವಿತೋಟ ಇದ್ದರು.