ಶಿರಸಿ: ಯಾವುದು ನಮಗೆ ಆಗಬಾರದು ಎಂಬುದನ್ನು ನಾವು ಬಯಸುತ್ತೇವೆಯೋ ಅದು ನಮ್ಮಿಂದ ಇನ್ನೊಬ್ಬನಿಗೂ ಆಗಬಾರದು ಎಂಬುದು ನಿಜವಾದ ಧರ್ಮದ ತಿರುಳು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ಹೇಳಿದರು.
ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ, ದಾನಿ ಶ್ರೀನಿವಾಸ ಹೆಬ್ಬಾರ್ ಹಾಗೂ ಹೇಮಾ ಹೆಬ್ಬಾರ್ ಅವರಿಗೆ ಅನುಗ್ರಹ ಸಂಮಾನ ನೆರವೇರಿಸಿ ಅವರು ಮಾತನಾಡಿದರು.
ಧಾರಣೆಗೆ ಯೋಗ್ಯವಾದುದೇ ಧರ್ಮ. ಪರೋಪಕಾರದಲ್ಲಿ ತೊಡಗಿಕೊಂಡ ವ್ಯಕ್ತಿ ನಿತ್ಯ ಸಂತೋಷಿ ಆಗಲು ಸಾಧ್ಯ. ಮಾಡುವ ಕಾರ್ಯ ನಮ್ಮ ಅಂತರಂಗವನ್ನು ತೃಪ್ತಿಕೊಡುತ್ತದೆ. ನಮ್ಮದೇ ನೆರಳಿಗೆ ನಾವು ಒಪ್ಪಿಗೆ ಆಗುವ ಮಾದರಿಯಲ್ಲಿ ನಾವು ಬದುಕಬೇಕು. ನಾವು ಮಾಡುವ ಕೆಲಸ ಆತ್ಮತೃಪ್ತಿ ಸಿಕ್ಕರೆ ಪರಮಾತ್ಮ, ಸಮಾಜವೂ ಒಪ್ಪಿಕೊಳ್ಳುತ್ತದೆ. ಮನುಷ್ಯ ಬದುಕಿನಲ್ಲಿ ಸಂಸ್ಕಾರ ಒಡನಾಟದ ಮೂಲಕ ಬಂಗಾರವಾಗಿಸಿಕೊಳ್ಳಬಹುದಾಗಿದೆ. ಸಂತುಷ್ಠ ಚಿತ್ತ ಸಂಪದ್ಭರಿತವಾಗಿರುತ್ತದೆ ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ಸಾಕ್ಷಿಯಾಗಿದ್ದಾರೆ ಎಂದರು.
ಈ ಪ್ರಪಂಚದಲ್ಲಿ ನಾವು ಹೊಂದಿದ ಸಂಪತ್ತು ಯಾವುದೂ ನಮ್ಮದಲ್ಲ. ಸಮಾಜ ಸೇವೆ ಮೂಲಕ ಪುನಃ ಪರಮಾತ್ಮನಿಗೆ ಸಮರ್ಪಿಸಿದರೆ ಜೀವನ ಸಾರ್ಥಕ ಎನಿಸುತ್ತದೆ. ಮನುಷ್ಯನ ಜೀವನ ಉಜ್ಜೀವನ, ಸೃಜನಶೀಲ ಆಗಬೇಕು ಎಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಜೀವನದ ಪ್ರಾರಂಭದಿಂದ ಅಂತ್ಯದವರೆಗೂ ಪ್ರತಿಯೊಬ್ಬ ಸಂತೋಷವನ್ನೇ ಬಯಸುತ್ತಾನೆ. ನಿತ್ಯ ಸಂತೋಷಿ ಹೇಗಿರುತ್ತಾರೆ ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ದಂಪತಿ ಮಾದರಿ ಎಂದರು.
ಸಂಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಹೆಬ್ಬಾರ್, ಅಭಿವೃದ್ಧಿ ಕಾರ್ಯದಲ್ಲಿ ನಾವು ಪ್ರಾಮಾಣಿಕವಾಗಿ ತೊಡಗಿಕೊಂಡರೆ ಸಮಾಜ ಒಗ್ಗಟ್ಟಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ಆಗಮಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ದೇವಾಲಯದ ಕಟ್ಟಡ ಕಾರ್ಯಕ್ಕೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆ ನೀಡಿ ಪಾಲ್ಗೊಳ್ಳಬೇಕು ಎಂದರು.
ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ದೇವಾಲಯದ ಪ್ರಧಾನ ಅರ್ಚಕ ವಿ. ಕುಮಾರ ಭಟ್ ಶ್ರೀನಿವಾಸ ಹೆಬ್ಬಾರ್ ಅವರ ಧಾರ್ಮಿಕ ಸೇವೆ ನೆನಪಿಸಿದರು. ಶ್ರೀಧರ ಭಟ್ ಕೊಳಗಿಬೀಸ್ ಇತರರಿದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
ಪರೋಪಕಾರದಲ್ಲಿ ತೊಡಗಿಕೊಂಡ ವ್ಯಕ್ತಿ ನಿತ್ಯ ಸಂತೋಷಿಯಾಗಲು ಸಾಧ್ಯ: ಡಾ.ಭೀಮೇಶ್ವರ ಜೋಷಿ
