ಸಿದ್ದಾಪುರ: ತಾಲೂಕಿನ ವಾಟಗಾರ್ ಮೂಲದ ಪ್ರಸಿದ್ದ ವೈದ್ಯ ಡಾ.ಲೋಲಿತ್ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಯ ಆರ್ಥೋಸರ್ಜನ್ ಡಾ.ಲೋಲಿತ್ (36 ) ಅವರು ಗುರುವಾರ ನಸುಕಿನಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ವಾಟಗಾರ್ ಗ್ರಾಮದ ಲೋಲಿತ್ ನಿವೃತ್ತ ಶಿಕ್ಷಕ ಲೋಕೇಶ್ವರ್ ನಾಯ್ಕ ಅವರ ಪುತ್ರ.
ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಬಯಸಿದ ಜೀವನ ಸಿಗಲಿಲ್ಲ, ನಿರೀಕ್ಷಿತ ಯಶಸ್ಸು ಕಾಣದ ಕಾರಣ ಜೀವತ್ಯಾಗ ಮಾಡಿರುವ ಬಗ್ಗೆ ಬರೆದಿದ್ದಾರೆ. ಸೋದರಿಯರು, ಪೋಷಕರು ಮತ್ತು ಪತ್ನಿಗೆ ಕ್ಷಮೆ ಕೇಳಿದ್ದು, ನನ್ನ ಸಾವಿಗೆ ತಾವೇ ಕಾರಣ, ಪೊಲೀಸರು ಮತ್ತು ಮೀಡಿಯಾದವರು ಈ ವಿಷಯ ಹೈಲೈಟ್ ಮಾಡಬಾರದಾಗಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡಿಜಿಥಿಂಕ್ ವಿದ್ಯಾರ್ಥಿಯಾಗಿದ್ದ ಲೋಲಿತ್ ನಾಯ್ಕ ಶಿವಮೊಗ್ಗದ ಪ್ರಸಿದ್ಧ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ವೃತ್ತಿ ನೈಪುಣ್ಯತೆಯಿಂದ ಹೆಸರುವಾಸಿಯಾಗಿದ್ದು ಅವರ ನಿಧನಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
ಲೋಲಿತ್‌ಗೆ ಇಬ್ಬರು ಅವಳಿ ಸೋದರಿಯರಿದ್ದು, ಅವರ ವಿವಾಹ ಮಾಡಿದ ಬಳಿಕ ಕಳೆದ ವರ್ಷ ಡಾ.ಸುಚಿತ್ರಾ ಅವರೊಂದಿಗೆ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಲೋಲಿತ್, ಸುಚಿತ್ರಾ ಅವರು ಅನೋನ್ಯವಾಗಿದ್ದರು. ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಖ್ಯಾತ ಪ್ರಸೂತಿ ತಜ್ಞೆಯಾಗಿದ್ದ ಸುಚಿತ್ರಾ ಅವರು ಮೈಸೂರು ಜಿಲ್ಲೆ ಕೆ.ಆರ್.ಪೇಟೆಯವರು. ತಿಂಗಳ ಹಿಂದೆ ಹೆರಿಗೆಯಾಗಿದ್ದ ಸುಚಿತ್ರಾ ಅವರನ್ನು ಶಿವಮೊಗ್ಗದಲ್ಲೇ ಬಾಣಂತನ ಮಾಡುವ ಕಾರಣಕ್ಕೆ ಕಳೆದ ವಾರವಷ್ಟೇ ಗೋಪಾಲಗೌಡ ಬಡಾವಣೆಗೆ ಕರೆಸಿಕೊಂಡಿದ್ದ ಲೋಲಿತ್ ಅವರು, ಪತ್ನಿಯ ಆರೈಕೆಗೆ ಕೆಲಸದವರನ್ನು ನೇಮಿಸಿದ್ದರು.
ಬುಧವಾರ ಕೆಲಸ ಮುಗಿಸಿ ಬಂದು ಮನೆಯ ಹಾಲ್‌ನಲ್ಲಿ ಮಲಗಿದ್ದ ಲೋಲಿತ್, ಮಧ್ಯರಾತ್ರಿ ರೂಮಿಗೆ ಹೋಗಿ ಮಲಗಿದ್ದರು. ಬೆಳಗ್ಗೆ ರೂಮಿನ ಬಾಗಿಲು ತೆಗೆಯದೆ ಮತ್ತು ಮೊಬೈಲ್ ಕರೆಗೂ ಸ್ಪಂದಿಸದ ಪತಿ ಇದ್ದಿದ್ದರಿಂದ ಗಾಬರಿಯಾಗಿದ್ದ ಸುಚಿತ್ರಾ ಅವರು, ಬಂಧುಗಳಿಗೆ ಫೋನ್ ಮಾಡಿದ್ದರು. ಕೆಲಸದಾಕೆಯೊಂದಿಗೆ ಸೇರಿ ರೂಮಿನ ಚಿಲಕ ಮುರಿದು ನೋಡಿದಾಗ ಲೋಲಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಣತ ಯುವ ವೈದ್ಯನ ಅಕಾಲಿಕ ಮರಣಕ್ಕೆ ಶಿವಮೊಗ್ಗದ ವೈದ್ಯಲೋಕ, ಸಿದ್ದಾಪುರದ ಹಲವು ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.