Slide
Slide
Slide
previous arrow
next arrow

ಇಂಜಿನೀಯರಿಂಗ್ ಕಾಲೇಜಿನ ಆವರಣ ಗೋಡೆ ಕಾಮಗಾರಿಗೆ ಶಾಸಕಿ ಚಾಲನೆ

300x250 AD

ಕಾರವಾರ: ತಾಲೂಕಿನ ಮಾಜಾಳಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಕಾರ್ಯಾಗಾರ ಮತ್ತು ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕಿ ರೂಪಾಲಿ ನಾಯ್ಕ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಶೈಕ್ಷಣಿಕ ಕೇಂದ್ರಗಳೂ ದೇವಾಲಯಗಳಂತೆ. ಹೀಗಾಗಿ ದೇಗುಲಗಳನ್ನೆಲ್ಲ ಹೇಗೆ ಗುಣಮಟ್ಟದಲ್ಲಿ, ಎಲ್ಲಿಯೂ ಚ್ಯುತಿ ಬಾರದಂತೆ ನಿರ್ಮಾಣ ಮಾಡುತ್ತೇವೆಯೋ, ಹಾಗೆಯೇ ಶಿಕ್ಷಣ ಸಂಸ್ಥೆಗಳಲ್ಲೂ ಕಾಮಗಾರಿಗಳು ಗುಣಮಟ್ಟದಲ್ಲಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಇಂಜಿನೀಯರಿಂಗ್ ಕಾಲೇಜಿನ ಅಭಿವೃದ್ಧಿಗೆ 5 ಕೋಟಿ ಅನುದಾನವನ್ನು ಮಂಜೂರಿಸಿದ್ದೇನೆ. ಅಲ್ಲದೇ, ಇಂಜಿನೀಯರಿಂಗ್ ಕಾಲೇಜಿನ ಉನ್ನತೀಕರಣಕ್ಕೆ ಸಚಿವ ಅಶ್ವತ್ಥನಾರಾಯಣ ಅವರಲ್ಲಿ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಾನು ಶಾಸಕಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಈ ಕಾಲೆಜಿಗೆ ಬರಲು ಸರಿಯಾದ ರಸ್ತೆ ಇರಲಿಲ್ಲ. ನನ್ನ ಅನುದಾನದಿಂದ ಇಲ್ಲಿ ರಸ್ತೆಯನ್ನು ಮಾಡಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದೇನೆ. ಅಲ್ಲದೇ, ಕಾಲೇಜಿನ ಆವರಣದಲ್ಲಿ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪಾಲಕರಿಗೆ ಹಾಗೂ ಗುರು ಹಿರಿಯರಿಗೆ ಗೌರವ ತರುವ ಕೆಲಸ ಮಾಡಬೇಕು. ಸಮಾಜದ ಉನ್ನತಿಗೆ ಹೊಗಲು ಶ್ರಮಿಸಬೇಕು. ಒಳ್ಳೆಯ ವ್ಯಕ್ತಿಯಾಗಿ ಕೊಡುಗೆ ನೀಡಬೇಕು ಎಂದರು.
ಕಾಲೇಜಿನಲ್ಲಿ ಏನೆ ಸಮಸ್ಯೆಗಳಿದ್ದರೂ ನನ್ನಲ್ಲಿ ಹೇಳಿದರೆ, ನಾನು ಅದನ್ನು ನೆರವೇರಿಸುತ್ತೇನೆ. ವಿದ್ಯಾರ್ಥಿಗಳಿಗೂ ಏನಾದರೂ ಸಮಸ್ಯೆಯಾದರೆ ಬಂದು ಹೇಳಿಕೊಳ್ಳಬಹುದು. ಅದನ್ನು ಸರಿಪಡಿಸಲಾಗುವುದು. ಶಾಸಕರ ನಿಧಿಯಡಿ ಕಾಲೇಜಿನಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಕಾಲೇಜು ಪ್ರಾಚಾರ್ಯರಾದ ಡಾ.ಶಾಂತಲಾ ಅವರು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಸಾರಿಗೆ ಬಸ್ ಸಮಸ್ಯೆಯ ಕುರಿತು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಸಾರಿಗೆ ಬಸ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಇದೆ. ಅದನ್ನು ಶೀಘ್ರದಲ್ಲಿ ಸರಿಪಡಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನ ವಿದ್ಯಾರ್ಥಿ ಚೇತನ್ ಗುತ್ತೇದಾರ್ ನಿರೂಪಿಸಿದರು. ಉಪನ್ಯಾಸಕಿ ಲಾವಣ್ಯ ಹೆಗಡೆ ವಂದನಾರ್ಪಣೆ ಮಾಡಿದರು. ಮಾಜಾಳಿ ಗ್ರಾ.ಪಂ ಸದಸ್ಯರು, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top