ಭಟ್ಕಳ: ಎ.ಐ.ಯು.ಟಿ.ಯು.ಸಿ.ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ತಾಲ್ಲೂಕಾ ಸಮಾವೇಶವು ಶಿರಾಲಿಯ ಸಿದ್ಧಿವಿನಾಯಕ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ, 12 ವರ್ಷಗಳ ಹಿಂದೆ ಕೇವಲ 500 ರೂ. ಪ್ರೋತ್ಸಾಹಧನ ಇದ್ದ ಆಶಾ ಕಾರ್ಯಕರ್ತೆಯರು ಇಂದು ನಿಗದಿತ ಗೌರವಧನ 5000 ಪಡೆಯುತ್ತಿರುವುದು, ಸಮವಸ್ತ್ರ ಇತ್ಯಾದಿ ಹಕ್ಕುಗಳು ದೊರೆತಿರುವುದು ರಾಜ್ಯದ ಆಶಾಗಳ ಐಕ್ಯ ಹೋರಾಟದ ಫಲವಾಗಿದೆ. ಆದರೆ ಆಶಾಗಳ ಬಗೆಗೆ ಸರ್ಕಾರದ ನಿರ್ಲಕ್ಷ ಧೋರಣೆಯಿಂದಾಗಿ ಜ್ವಲಂತ ಸಮಸ್ಯೆಗಳು ಬಗೆಹರಿದಿಲ್ಲ ಎಂದರು.
ಆರ್.ಸಿ.ಎಚ್ ಪೋರ್ಟಲ್‌ನಿಂದಾಗಿ ದುಡಿದಷ್ಟು ಹಣ ದೊರೆಯುತ್ತಿಲ್ಲ. ಇದರಿಂದಾಗಿ ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಆಶಾ ಕಾರ್ಯಕರ್ತರುಗಳ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಬೀದಿಗೆ ಬರುವಂತಾಗಿದೆ. ಆದ್ದರಿಂದ ಸರ್ಕಾರ ಆಶಾಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಆರ್‌ಸಿಎಚ್ ಪೋರ್ಟಲ್‌ನ್ನು ತೆಗೆದು ಹಾಕಿ 12000 ಮಾಸಿಕ ವೇತನ ನೀಡಬೇಕು. ಇದಕ್ಕಾಗಿ ಪಿಎಚ್‌ಸಿಯಿಂದ ತಾಲೂಕು ಮಟ್ಟದವರೆಗೆ ಎಲ್ಲ ಹಂತಗಳಲ್ಲಿ ಆಶಾಗಳು ಸಂಘಟಿತರಾಗಬೇಕು. ರಾಜಿ ರಹಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನ ತಾಲ್ಲುಕು ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಅನಿತಾ ರಾಜಕುಮಾರ್, ಉಪಾಧ್ಯಕ್ಷರುಗಳಾಗಿ ದೀಪಾ ಮೊಗೇರ, ರೇಖಾ ಆಚಾರಿ, ಸುಶೀಲಾ ಖಾರ್ವಿ, ಪದ್ಮಾವತಿ ಜ. ನಾಯ್ಕ, ಗಾಯತ್ರಿ ನಾಯ್ಕ ಕಾರ್ಯದರ್ಶಿಯಾಗಿ ಜಯಂತಿ ಮಿಂಚೆ, ಜಂಟಿ ಕಾರ್ಯದರ್ಶಿಗಳಾಗಿ ಚಂದ್ರಾವತಿ ನಾಯ್ಕ, ಜಲಂಧರಿ ಚಿತ್ರಾಪುರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೈನಾಝ್ ಮೋಮಿನ್, ನಾಗರತ್ನ ನಾಯ್ಕ, ಪದ್ಮಾವತಿ ನಾಯ್ಕ ಬೆಳಕಿ, ಶೋಭಾ ಮೊಗೇರ, ಜ್ಯೋತಿ ನಾಯ್ಕ, ನಿರ್ಮಲಾ ನಾಯ್ಕ, ಜಯಲಕ್ಷ್ಮಿ ದೇವಾಡಿಗ, ಕುಸುಮಾ ಗವಾಳಿ, ಪದ್ಮಾವತಿ ನಾಯ್ಕ ಕೋಣಾರ ಆಯ್ಕೆಯಾದರು. ಈ ಸಮಾವೇಶದಲ್ಲಿ ತಾಲ್ಲೂಕಿನ ಸಮಸ್ತ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
*