ಸಿದ್ದಾಪುರ: ತಾಲೂಕಿನ ಬಿದ್ರಕಾನಿನ ಎಂ. ಜಿ. ಸಿ. ಎಂ. ಪ್ರೌಢಶಾಲೆಯಲ್ಲಿ ಹಾವುಗಳ ಕುರಿತಾಗಿ ಮಾಹಿತಿ ನೀಡುವ ಉದ್ದೇಶದಿಂದ ಆಯೋಜನೆಗೊಂಡು,ಸುಹಾಸ್ ಹೆಗಡೆ ನಡೆಸಿಕೊಟ್ಟ “ಹಾವು-ನಾವು” ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಪ್ರಕೃತಿಯೊಂದಿಗೆ ಮಾನವನು ಈಗ ನಡೆದುಕೊಳ್ಳುತ್ತಿರುವ ರೀತಿಯಿಂದ ಪ್ರಕೃತಿಯ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು. ಹಾವುಗಳು ಪರಿಸರ ಸಮತೋಲನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ನಂತರದಲ್ಲಿ ವಿಷಕಾರಿ ಹಾವುಗಳು, ಅವುಗಳ ಪರಿಣಾಮದ ಬಗ್ಗೆ, ಹಾವುಗಳು ಕಚ್ಚಿದಾಗ ತಕ್ಷಣ ಕೈಗೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಕುರಿತಾಗಿ ಮಾಹಿತಿ ನೀಡಿದರು. ಹಾವುಗಳ ಕುರಿತಾಗಿ ಸಾಮಾನ್ಯವಾಗಿ ಇರುವ ನಂಬಿಕೆ ಹಾಗೂ ಸತ್ಯಾಂಶಗಳ ಕುರಿತಾಗಿ ವಿಸ್ತಾರವಾಗಿ ಮಾಹಿತಿ ನೀಡುತ್ತಾ, ಉರಗಗಳ ಬಗ್ಗೆ ಎಲ್ಲರೂ ತಿಳಿದಿರಬೇಕಾದ ಮಾಹಿತಿಗಳನ್ನು ತಿಳಿಸಿದರು.
ನಮ್ಮ ಸುತ್ತಮುತ್ತಲು ಹೆಚ್ಚಾಗಿ ಕಂಡುಬರುವ ನಾಗರ ಹಾವು, ಕೇರೆ ಹಾವು, ಕಟ್ಟುಹಾವು, ತೋಳ ಹಾವು, ಕನ್ನಡಿ ಹಾವು, ರಕ್ತಮಂಡಲ, ಮರಳು ಹಾವು, ಕವಚ ಬಾಲದ ಹಾವು, ಕಂಚುಹಪ್ರೆ, ಕುಕ್ರಿ ಹಾವು, ಹಾರುವ ಹಾವು, ಹಸಿರು ಹಾವು ಹೀಗೆ 25 ಕ್ಕೂ ಹೆಚ್ಚು ಹಾವುಗಳ ಕುರಿತಾಗಿ ವಿಸ್ತಾರವಾಗಿ ಪೋಟೊದೊಂದಿಗೆ ವಿವರಿಸಿದರು. ಕಾಳಿಂಗ ಸರ್ಪ, ಹೆಬ್ಬಾವುಗಳ ಕುರಿತಾಗಿಯೂ ಮಾಹಿತಿ ನೀಡಿದರು.
ಹಾವುಗಳ ವಾಸ, ಅವುಗಳ ಟೆರೆಟರಿ, ಆಹಾರ, ಜೀವನಕ್ರಮ, ದೇಹದ ರಚನೆ, ವಿಷಸಂಗ್ರಹ, ಅವುಗಳ ವರ್ತನೆ ಹೀಗೆ ಎಲ್ಲ ವಿಷಯಗಳ ಕುರಿತಾಗಿ ಸುಹಾಸ ಹೆಗಡೆಯವರು ಮಾಹಿತಿ ನೀಡಿದರು. ಹಾವುಗಳ ಕುರಿತಾಗಿ ಮಾಹಿತಿ ನೀಡುವ ಕಿರು ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ, ಹಾವುಗಳ ಬಗ್ಗೆ ಮಾಹಿತಿ ನೀಡಿ, ಹಾವುಗಳನ್ನು ರಕ್ಷಿಸುವಲ್ಲಿ ನಮ್ಮ ಜವಾಬ್ದಾರಿಯನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಎಸ್. ಎಸ್. ಪಮ್ಮಾರ, ಶಾಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.