ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ, ಪೊಲೀಸ್ ಇಲಾಖೆ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದ ಟೌನಶಿಪ್‌ನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು- ನೆರವು ಕಾರ್ಯಕ್ರಮ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವಜ್ಯೋತಿ ಭವನದ ವಾರ್ಷಿಕೋತ್ಸವ ಸಮಾರಂಭವು ಜರುಗಿತು.
ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರೋಹಿಣಿ ಡಿ.ಬಸಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವವೆ ಕೊಂಡಾಡುವ ಸಂವಿಧಾನ ನಮ್ಮದು. ಈ ದೇಶದ ಪ್ರತಿಯೊಬ್ಬನಿಗೂ ಸ್ವತಂತ್ರವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಈ ದೇಶದ ಕಾನೂನು ವ್ಯವಸ್ಥೆ ಅತ್ಯಂತ ಬಲಾಢ್ಯವಾಗಿದೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕೆಂದು ಹೇಳಿ ಸಂವಿಧಾನ ವಿಶೇಷತೆಯನ್ನು ವಿವರಿಸಿದರು.
ತಹಶೀಲ್ದಾರ್ ಶೈಲೇಶ್ ಪರಮಾನಂದ ಮಾತನಾಡಿ, ಸರ್ವಶ್ರೇಷ್ಟವಾದ ಸಂವಿಧಾನ ನಮ್ಮದು. ನಮ್ಮ ಸಂವಿಧಾನ ನಮ್ಮೆಲ್ಲರ ಪರಮ ಗ್ರಂಥವಾಗಿದೆ. ಕಾನೂನಿನ ಅರಿವನ್ನು ಸರ್ವವ್ಯಾಪಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದರು. ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರು ಮಾತನಾಡಿ ನಮ್ಮ ದೇಶದ ಪ್ರಜೆಗಳಿಗಿರುವ ಹಕ್ಕು ಬೇರೆ ಯಾವ ದೇಶದಲ್ಲಿ ಇಲ್ಲ. ಯಾವುದೇ ಸರಕಾರ ಆಡಳಿತಕ್ಕೆ ಬಂದರೂ ಸಂವಿಧಾನದ ಚೌಕಟ್ಟಿನಡಿಯಲ್ಲೆ ಆಡಳಿತ ನಡೆಸಬೇಕು. ಇಂತಹ ಉತ್ಕೃಷ್ಟ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಡಾ.ಪದ್ಮಾಜಿ, ಸಮಾನತೆಯ ಬದುಕು ಮತ್ತು ಹಕ್ಕನ್ನು ನಮ್ಮ ದೇಶದ ಸಂವಿಧಾನ ನಮಗೆಲ್ಲರಿಗೂ ನೀಡಿದೆ. ಸಂವಿಧಾನದ ಆಶಯಗಳು ಉಜ್ವಲ ಭವಿಷ್ಯಕ್ಕೆ ಪ್ರೇರಣಾದಾಯಿಯಾಗಿದೆ ಎಂದು ಹೇಳಿ, ಸುಸಂಸ್ಕೃತ ನಡವಳಿಕೆಯ ಸಂಸ್ಕಾರಯುತ ಜೀವನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯ ತನ್ನನ್ನು ತಾನು ಸಮರ್ಪಿಸಿಕೊಂಡಿದೆ ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜೇಶ್ವರಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಕೀಲ ಆರ್.ವಿ.ಗಡೆಪ್ಪನವರ ನಿರೂಪಿಸಿ, ವಂದಿಸಿದರು. ವಕೀಲರ ಸಂಘದ ಅಧ್ಯಕ್ಷ ವಿ.ಆರ್.ಹೆಗಡೆ, ಸಿಪಿಐ ಬಿ.ಎಸ್.ಲೋಕಾಪುರ, ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾ ಮೊದಲಾದವರು ಉಪಸ್ಥಿತರಿದ್ದರು.