ಭಟ್ಕಳ: ಸ್ವರ್ಣವಲ್ಲೀಯ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನವು ಹಮ್ಮಿಕೊಂಡಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ಇಲ್ಲಿನ ಶ್ರೀನಾಗಯಕ್ಷೆ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿದವು.
ಭಾಷಣ ಸ್ಪರ್ಧೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸೇಂಟ್ ಥಾಮಸ್ ಶಾಲೆಯ ಶ್ರೀಶಾ ಶೇಟ್ ಪ್ರಥಮ, ಪ್ರೌಢಶಾಲಾ ವಿಭಾಗದಲ್ಲಿ ಶ್ರೀವಲಿ ಪ್ರೌಢಶಾಲೆಯ ಮೋನಿಕಾ ಜೆ.ನಾಯ್ಕ ಪ್ರಥಮ, ವಿದ್ಯಾಭಾರತಿ ಶಾಲೆಯ ಶ್ರೀಶ್ ಜಿ.ಕೆ. ದ್ವಿತೀಯ ಸ್ಥಾನ ಪಡೆದರು. ಗೀತ ಕಂಠಪಾಠ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾಭಾರತಿ ಶಾಲೆಯ ಅನಂತ ಹೆಬ್ಬಾರ್, ಶ್ರೀವಲಿ ಪ್ರೌಢಶಾಲೆಯ ನಾಗಶ್ರೀ ಹೆಗಡೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು.
ನಿರ್ಣಾಯಕರಾಗಿ ಲೆಕ್ಕತಜ್ಞ ಬಿ.ಕೆ.ಪೈ, ಅರ್ಚಕ ಉದಯ ಜಿ.ಪ್ರಭು ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮದಾಸ ಪ್ರಭು, ಭಗವದ್ಗೀತೆಯು ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ- ಕಷ್ಟಗಳಿಗೆ ಪರಿಹಾರ ನೀಡುವ ಗ್ರಂಥವಾಗಿದೆ. ಪ್ರತಿಮನೆಯಲ್ಲಿ ಪ್ರತಿದಿನ ಇದರ ಪಠಣವಾಗಬೇಕು ಎಂದರು.
ಸಂಯೋಜಕರಾದ ಗಣಪತಿ ಶಿರೂರ, ಶ್ರೀನಾಥ ಪೈ, ಶಿಕ್ಷಕರಾದ ಶ್ರೀಧರ ಶೇಟ್, ರಮ್ಯಾ ನಾಯ್ಕ, ದೇವಸ್ಥಾನದ ಪ್ರಮುಖರಾದ ರಾಧಾಕೃಷ್ಣ ಪ್ರಭು, ಕೃಷ್ಣಾನಂದ ಪ್ರಭು, ವಿಘ್ನೇಶ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಶ್ರೀನಾಗಯಕ್ಷೇ ದೇವಸ್ಥಾನದ ವತಿಯಿಂದ ಸ್ಮರಣಿಕೆ, ನಗದು ಬಹುಮಾನವನ್ನು ವಿತರಿಸಲಾಯಿತು.