ಮುಂಡಗೋಡ: 2020- 21ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿರುವ ರೈತರ ಪೈಕಿ ಕೆಲವರ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ಇರುವುದರಿಂದ ವಿಮಾ ಸಂಸ್ಥೆಯಿಂದ ಬೆಳೆ ವಿಮೆ ತಿರಸ್ಕೃತಗೊಂಡಿವೆ.
ತಿರಸ್ಕೃತಗೊಂಡ ರೈತರ ಯಾದಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಪ್ರದರ್ಶಿಸಲಾಗಿದೆ. 2020- 21ನೇ ಸಾಲಿನ ವಿಮೆ ಅರ್ಜಿಗಳಿಗೆ ಸಬಂಧಿಸಿದಂತೆ ದಾಖಲಾತಿಯನ್ನು 15 ದಿನಗಳ ಒಳಗಾಗಿ (ಡಿ.15) ಸಲ್ಲಿಸಲು ಕೋರಲಾಗಿದೆ.
ರೈತರಿಂದ ಯಾವುದೇ ಆಕ್ಷೇಪಣಾ ಅರ್ಜಿಗಳು ಸ್ವೀಕೃತವಾಗದೆ ಇದ್ದಲ್ಲಿ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಲಾಗುವುದು. 2020-21ರ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿಯನ್ನು ಒದಗಿಸುವುದು. ವಿಮೆಗೆ ನೊಂದಾಯಿಸಿದ ಬೆಳೆಯ ಉತ್ಪನ್ನವನ್ನು ಎ.ಪಿ.ಎಮ್.ಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ದಾಖಲೆ ಒದಗಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳಾದ ಮುಂಡಗೋಡ/ ಪಾಳಾ/ ಬೆಳೆವಿಮೆ ಪ್ರಿಮಿಯಮ್ ಪಾವತಿಸಿದ ಸಹಕಾರಿ ಸಂಘಗಳನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.