ಕುಮಟಾ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ ಡಿ.8ರೊಳಗೆ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ವಿವಿಧ ಪಕ್ಷಗಳ ಮುಖಂಡರಿಗೆ ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ- 2023ರ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಕರೆಯಲಾದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸದಾಗಿ 18 ವರ್ಷ ಪೂರೈಸಿದ ಯುವ ಮತದಾರರಿಗೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ನಮೂನೆ 6ರಲ್ಲಿ ಅವಕಾಶ ನೀಡಲಾಗಿದೆ. ಮರಣ ಹೊಂದಿದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ನಮೂನೆ 7, ಮತದಾರರ ಹೆಸರು ತಿದ್ದುಪಡಿ ಮಾಡಲು ನಮೂನೆ-8ನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲವೇ ಮತದಾರರು ನೇರವಾಗಿ ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
ಸ್ಥಳಾಂತರ ಅಥವಾ ವಿವಾಹವಾದಾಗ ವರ್ಗಾವಣೆ ಬಯಸಿದ್ದಲ್ಲಿ ಅವರು ಎಲ್ಲಿ ವರ್ಗಾವಣೆ ಬಯಸುತ್ತಾರೋ ಅಲ್ಲಿನ ಬಿಎಲ್‌ಒಗಳನ್ನು ಸಂಪರ್ಕಿಸಿ ಅಲ್ಲಿಯೇ ನಮೂನೆ-8ನ್ನು ತುಂಬಬೇಕು. ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು ಅವಕಾಶ ನೀಡಲಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಯಾವುದೇ ಅರ್ಹ ಮತದಾರರ ಹೆಸರು ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹೆಸರು ನೋಂದಣಿ, ಕಡಿತ, ತಿದ್ದುಪಡಿ ಸೇರಿದಂತೆ ನಿರ್ದಿಷ್ಟ ನಮೂನೆಯಲ್ಲಿಯೇ ಮಾಹಿತಿ ಪಡೆಯುತ್ತಿದ್ದು, ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ಮತದಾರರ, ಗಣ್ಯ ವ್ಯಕ್ತಿಗಳ ಹೆಸರು ತಪ್ಪಿ ಹೋದಲ್ಲಿ ಸಂಬAಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ತಿಳಿಸುವಂತೆ ಹಾಗೂ ಪ್ರತಿ ಮತಗಟ್ಟೆಗಳ ಏಜೆಂಟರುಗಳ ಗಮನಕ್ಕೆ ತರುವಂತೆ ಸೂಚಿಸಿದರು. ಅಲ್ಲದೇ ಮುಂಬರುವ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ, ದೋಷಗಳಿಗೆ ಅವಕಾಶ ನೀಡದೇ ಆರೋಗ್ಯ ಪೂರ್ಣ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.