ಸಿದ್ದಾಪುರ: ಕ್ರೀಡೆಗೆ ಯಾವುದೇ ಜಾತಿ ಧರ್ಮಗಳಿಲ್ಲ. ವರ್ಗ ಸಂಘರ್ಷಗಳು ಸಹ ಇಲ್ಲ. ಇದು ಗ್ರಾಮದ, ಸಮಾಜದ ನಡುವೆ ಸ್ನೇಹ, ಶಾಂತಿ, ಸೌಹಾರ್ದಕ್ಕೆ ಕಾರಣವಾಗಿದೆ ಎಂದು ಅರಣ್ಯ ಅತಿಕ್ರಮಣದಾರರ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ತಾಲೂಕಿನ ಸಂಪಖಂಡದಲ್ಲಿ ಶ್ರೀನಾಗ ಚೌಡೇಶ್ವರಿ ಯುವ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಅಂಕಣ ಉದ್ಘಾಟಿಸಿ ಮಾತನಾಡಿದರು.
ಟೀಮ್ ಪರಿವರ್ತನೆ ಮುಖ್ಯಸ್ಥ ಹಿತೇಂದ್ರ ನಾಯ್ಕ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಯಕರಾದವರು ನಮ್ಮನ್ನು ಯಾಕೆ ಜನರು ಈ ಸ್ಥಾನ ನೀಡಿದ್ದಾರೆ, ನನ್ನ ಜವಾಬ್ದಾರಿ ಏನು ಎಂದು ತಿಳಿದು ನಡೆಯಬೇಕು. ಅಂತೆಯೇ ನಾವು ಯಾರನ್ನು ಆಯ್ಕೆ ಮಾಡುತ್ತಿದ್ದೇವೆ, ಅವನು ಕಷ್ಟದಲ್ಲಿ ನಮ್ಮ ಸ್ಪಂದನೆಗೆ ಬರುವನೇ ಎಂದು ಅರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಪ್ರೊಬೆಷನರಿ ಪಿಎಸ್‌ಐ ಅಕ್ಷಯ್‌ಕುಮಾರಿ ಮಾತನಾಡಿ, ಈಗಿನ ಯುವಕರು ಜೂಜಾಟ, ಅತಿಯಾದ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥ ಮಾಡುವುದರ ಜೊತೆಗೆ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಪಾಲಕರು ಇದರತ್ತ ಗಮನ ಹರಿಸಬೇಕು. ಮಕ್ಕಳು ದಾರಿ ತಪ್ಪುವ ಮೊದಲ ಹಂತದಲ್ಲೇ ಸರಿ ದಾರಿಗೆ ತರಬೇಕು. ಹಾಗೆ ಸಮಾಜ ಶಾಂತಿ ಸುವ್ಯವಸ್ಥೆತೆಯಿಂದ ಇರಬೇಕಾದರೆ ನಾಗರಿಕರ ಜವಾಬ್ದಾರಿಗಳು ಸಹ ಅತೀ ಮುಖ್ಯವಾಗಿರುತ್ತವೆ. ನಮ್ಮ ಜವಾಬ್ದಾರಿ ತಿಳಿದು ಸಮಾಜದ ಹಿತ ಕಾಪಾಡುವ ಎಂದರು.
ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡ್, ನಿವೃತ್ತ ಶಿಕ್ಷಕ ಎಲ್.ಜಿ.ನಾಯ್ಕ್, ಮಂಜುನಾಥ್ ನಾಯ್ಕ್ ಅರಶಿಣಗೋಡ, ರಾಜು ನಾಯ್ಕ್ ಮುಂಡಿಗೆ ತಗ್ಗು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪಂದ್ಯಾವಳಿಯಲ್ಲಿ ಕಾರ್ತಿಕ ಸಂಪಖಂಡ ನಾಯಕತ್ವದ ತಂಡ ಮುತ್ತಮ್ಮ ದೇವಿ ಕಲ್ಲೂರು ಪ್ರಥಮ, ಬೋಮ್ಮೆಶ್ವರ ಹೊಸೂರ್ ದ್ವಿತೀಯ, ನಾಯ್ಕ್ ಬ್ರದರ್ ತೃತೀಯ, ಚಾಡೇಶ್ವರಿ ಕಬ್ಗಾರ ಚತುರ್ಥ ಬಹುಮಾನ ಪಡೆದರು. ಜಾನಪದ ಕಲಾವಿದ ಗೋಪಾಲ್ ಕಾನಳ್ಳಿ, ಸಿದ್ದಾಪುರ ಬಿ ಇ ಒ ಕಛೇರಿ ವ್ಯವಸ್ಥಾಪಕ ಎಂ.ಬಿ.ನಾಯ್ಕ, ಸಾಹಿತ್ಯ ಕ್ಷೇತ್ರದ ಮೇಘನಾ ಶಿವಾನಂದ್, ಪತ್ರಕರ್ತ ದಿವಾಕರ್ ಸಂಪಖಂಡ ಅವರನ್ನು ಸನ್ಮಾನಿಸಿದರು.
ಸಮಾಜದ ನಡುವಿನ ಸೌಹಾರ್ದಕ್ಕೆ ಕ್ರೀಡೆ ಕಾರಣ: ರವೀಂದ್ರ ನಾಯ್ಕ
