• Slide
    Slide
    Slide
    previous arrow
    next arrow
  • ವೈದ್ಯ, ಭೀಮಣ್ಣರಿಂದಾಗಿ ಬ್ಲಾಕ್ ಅಧ್ಯಕ್ಷರ ಬದಲಾವಣೆ: ಆರೋಪ

    300x250 AD

    ಭಟ್ಕಳ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಏಕಾಏಕಿ ಬದಲಾವಣೆ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಮಾಡಲು ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರೇ ನೇರ ಕಾರಣ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ನಾಯ್ಕ ಅಸಮಾಧಾನದೊಂದಿಗೆ ನೇರವಾಗಿ ಆರೋಪಿಸಿದ್ದಾರೆ.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷದಿಂದ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಯಾವುದೇ ತಾರತಮ್ಯವಿಲ್ಲದೇ ಸಂಘಟನೆ ಮಾಡುತ್ತಾ ಬಂದಿದ್ದೆ. ಕಳೆದ ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಯಲ್ಲಿ ಏಕಾಏಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವೆಂಕಟೇಶ ನಾಯ್ಕ ಚಿತ್ರಾಪುರ ಎಂಬುವವರನ್ನು ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶ ಮಾಡಿದ್ದಾರೆಂಬುದನ್ನು ಕಂಡು ಆಶ್ಚರ್ಯವಾದೆ. ಆದರೆ ಬದಲಾವಣೆ ಪಕ್ಷದ ಹಾಗೂ ಪ್ರಕೃತಿಯ ನಿಯಮವಾಗಿರುವುದರಿಂದ ನನಗೇನು ಬೇಸರವಿಲ್ಲ. ನಾನು ಈಗಲೂ, ಮುಂದೆಯೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಕೆಲಸವನ್ನು ಮುಂದುವರೆಸಲಿದ್ದೇನೆ ಎಂದರು.
    ಮಾಜಿ ಶಾಸಕ ಮಂಕಾಳ ವೈದ್ಯ ಅವರು ಸಾಮಾಜಿಕ, ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟಂತಹ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತದ ಅಡಿಯಲ್ಲಿ ತಾಲೂಕಿನಲ್ಲಿ ಇತರ ಜಾತಿ ಹಾಗೂ ಸಮುದಾಯದಲ್ಲಿ ಹಲವಾರು ಹಿರಿಯ ಹಾಗೂ ಸಮರ್ಥ ನಾಯಕರಿದ್ದಾಗಿಯೂ ಕೂಡ ಅವರನ್ನು ಗಣನೆಗೆ ತೆಗೆದುಕೊಳ್ಳದೆ, ಅವರಲ್ಲಿ ಒಬ್ಬರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡದೇ, ಪುನಃ ನಾಮಧಾರಿ ಸಮಾಜದ ಮತ್ತೊಬ್ಬ ವ್ಯಕ್ತಿಯನ್ನು, ಅದರಲ್ಲೂ ನನ್ನ ಸಂಬಂಧಿಯನ್ನೆ ಆಯ್ಕೆ ಮಾಡಿ ನಮ್ಮ ನಮ್ಮಲ್ಲಿಯೇ ಸಂಬಂಧಗಳನ್ನು ಒಡೆದು ಆಳುವ ನೀತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಆದಾಗಿಯೂ ನೂತನವಾಗಿ ನೇಮಕಗೊಂಡ ಬ್ಲಾಕ್ ಅಧ್ಯಕ್ಷರಿಗೆ ನನ್ನ ಸಂಪೂರ್ಣ ಸಹಾಯ, ಸಹಕಾರವನ್ನು ಇನ್ನು ಮುಂದೆಯೂ ನೀಡಲಿದ್ದೇನೆ ಎಂದರು.
    ಪಕ್ಷದ ಕಾರ್ಯಕ್ರಮವನ್ನು ಯಾವುದೇ ಮುಖಂಡರ ಮನೆಯಲ್ಲಿ ನಡೆಸಬಾರದು. ಎಲ್ಲವೂ ಪಕ್ಷದ ಕಚೇರಿಯಲ್ಲಿ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದ್ದರು. ಅದರಂತೆ ಎಲ್ಲಾ ಕಾರ್ಯಕ್ರಮವನ್ನು ಸಹ ಕಚೇರಿಯಲ್ಲಿ ಅಥವಾ ಸಭಾಭವನದಲ್ಲಿ ನಡೆಸಿಕೊಂಡು ಬಂದಿದ್ದರಿಂದ ಮಂಕಾಳ ವೈದ್ಯರು ಅಸಮಾಧಾನಗೊಂಡು ಸಾಕಷ್ಟು ಕಾರ್ಯಕ್ರಮಕ್ಕೆ ಬಾರದೇ ಇದ್ದ ಘಟನೆಗಳು ನಡೆದಿದ್ದವು. ಪಕ್ಷದ ಸಭೆ- ಸಮಾರಂಭಗಳಿಗೆ ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಜಿ ಮಂತ್ರಿ ಆರ್.ಎನ್.ನಾಯ್ಕ ಹಾಗೂ ಇತರ ಕೆಲವು ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಕರೆಯಬಾರದು ಎಂದು ನನ್ನನ್ನು ಒತ್ತಾಯಿಸುತ್ತಿದ್ದರು. ಈ ವಿಚಾರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೂ ಸಹ ತಿಳಿಸಿದಾಗ ಅವರು ಕೂಡ ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂದು ತಿಳಿಸಿದ್ದಾರೆ.
    ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಹೊಸಗಾಗಿ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಿರುವುದರ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಏಕಾಏಕಿ ಯಾವುದೇ ಸೂಚನೆ ನೀಡದೆ ಬದಲಿಸುವುದರ ಬದಲು, ಈ ಹಿಂದಿನ ಬ್ಲಾಕ್ ಅಧ್ಯಕ್ಷರಿಂದಾದÀ ತಪ್ಪುಗಳ ಬಗ್ಗೆ ವಿವರಿಸಿ ನೋಟಿಸ್ ನೀಡಿ ಬದಲಾವಣೆ ಮಾಡಬಹುದಿತ್ತು. ಈ ಪ್ರಕ್ರಿಯೆಗೆ ನನ್ನ ಖಂಡನೆಯಿದೆ ಎಂದರು.
    ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಹಾಬಲೇಶ್ವರ ನಾಯ್ಕ, ಸತೀಶಕುಮಾರ ನಾಯ್ಕ, ಸುಲೇಮಾನ್, ಟಿ.ಡಿ.ನಾಯ್ಕ, ಮಹೇಶ ನಾಯ್ಕ ಮುಂತಾದವರು ಇದ್ದರು.

    ಪಕ್ಷ ಸಂಘಟನೆಯಲ್ಲಿ ಹೊಡೆದಾಟ, ಕೈ ಕೈ ಮಿಲಾಯಿಸುವ ಹಂತದಲ್ಲಿ ನಾನು ಹೋಗುವುದಿಲ್ಲ. ಕಾರಣ ಅದು ಪಕ್ಷ ಸಂಘಟನೆಯ ಹಾದಿಯಲ್ಲ. ಈಗಿನ ರಾಜಕೀಯ ನೀತಿ ರೀತಿಯಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದಿರುವ ಜೆ.ಡಿ.ನಾಯ್ಕ, ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top