ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಸೀಟಿನಲ್ಲಿ ಪತ್ತೆಯಾದ ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಪತ್ರವೊಂದು ಪತ್ತೆಯಾಗಿದ್ದು ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ತೀವ್ರ ತಲ್ಲಣ ಸೃಷ್ಟಿಸಿತ್ತು.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಈ ಘಟನೆ ನಡೆದಿದೆ. ಕೋಲ್ಕತ್ತಾದಿಂದ ಆಗಮಿಸಿದ ವಿಮಾನದ ಸೀಟಿನಲ್ಲಿ ಬೆದರಿಕೆಯ ಪತ್ರ ಪತ್ತೆಯಾಗಿದೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಹಾಗೂ ಭದ್ರತಾ ತಂಡ ತೀವ್ರ ಪರಿಶೀಲನೆ ನಡೆಸಿದೆ. ಆ ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
6E 379 ಇಂಡಿಗೋ ವಿಮಾನವು ನಿನ್ನೆ ಬೆಳಗ್ಗೆ 5:29 ಕ್ಕೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದು, 8:10 ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಒಂದು ಸೀಟಿನಲ್ಲಿ ಅನುಮಾನಾಸ್ಪದ ಟಿಶ್ಯೂ ಪೇಪರ್ ಇರುವುದನ್ನು ಇಂಡಿಗೋ ಸಿಬ್ಬಂದಿ ಗಮನಿಸಿದ್ದಾರೆ. ಅದರಲ್ಲಿ ವಿಮಾನವನ್ನು ಬಾಂಬ್ ಸಿಡಿಸಿ ಉಡಾಯಿಸುವ ಬೆದರಿಕೆಯ ಸಂದೇಶವಿತ್ತು. ಕೂಡಲೇ ಭದ್ರತಾ ಸಿಬ್ಬಂದಿಯನ್ನು ಕರೆಸಿ ತಪಾಸಣೆ ನಡೆಸಲಾಯಿತು. 6ಡಿ ಸೀಟ್ ಬಳಿ ಬಿಡಲಾಗಿದ್ದ ಟಿಶ್ಯೂ ಪೇಪರ್ ಮೇಲೆ ಅನಾಮಧೇಯ ವ್ಯಕ್ತಿಯೊಬ್ಬರು ನೀಲಿ ಶಾಯಿಯಲ್ಲಿ ಬಾಂಬ್ ಬೆದರಿಕೆ ಸಾಲುಗಳನ್ನು ಬರೆದಿದ್ದ. ಬಾಂಬ್ ನಿಷ್ಕ್ರಿಯ ದಳದವರು ವಿಮಾನವನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.