ಶಿರಸಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ನೀಡುವ ಅನುದಾನ ಪ್ರಮಾಣ ಹೆಚ್ಚಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೆಚ್ಚಿನ ಮುತುರ್ವಜಿ ವಹಿಸಬೇಕಾದ ಅಗತ್ಯವಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಹೇಳಿದರು.
ಇಲ್ಲಿನ ನಗರಸಭೆ ವ್ಯಾಪ್ತಿಯ ನಿಲೇಕಣಿಯಲ್ಲಿ ಪ್ರಾಧಿಕಾರದ 40 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಗೇರಿಯವರು ನಮ್ಮ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಬರುವಂತೆ ಮಾಡಿದರೆ ಈ ಕ್ಷೇತ್ರಕ್ಕೆ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ನೀಡುವದಾಗಿ ಭರವಸೆ ನೀಡಿದರು. ಪ್ರಾಧಿಕಾರಕ್ಕೆ ಪ್ರಸಕ್ತ ವರ್ಷ 30 ಕೋಟಿ ರೂ. ಅನುದಾನ ಮೀಸಲಿದ್ದು, 10 ಕೋಟಿ ರೂ. ಈ ಹಿಂದಿನ ಕಾಮಗಾರಿಗಳಿಗೆ ವೆಚ್ಚವಾಗಲಿದೆ. ಅಭಿವೃದ್ಧಿಗೆ 20 ಕೋಟಿ ರೂ. ಇದೆ, ಇದು ಸಾಕಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಇನ್ನಷ್ಟು ಗಮನ ನೀಡಬೇಕು ಎಂದರು. 2015ರಿಂದೀಚೆಗೆ ಶಿರಸಿ ವಿಧಾನಸಭೆ ಕ್ಷೇತ್ರಕ್ಕೆ ಅಂದಾಜು 8 ಕೋಟಿ ರೂ. ಅನುದಾನ ನೀಡಲಾಗಿದೆ. ಅನುದಾನ ಪ್ರಮಾಣ ಹೆಚ್ಚಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಪ್ರಾಧಿಕಾರದ ರಚನೆಯಿಂದಾಗಿ ಅನುದಾನ ಹಂಚಿಕೆಯಲ್ಲಿ ಪ್ರಾದೇಶಿಕವಾಗಿರುವ ಅಸಮತೋಲನವನ್ನು ಸರಿದೂಗಿಸಲು ಸಹಕಾರಿಯಾಗಿದೆ. ಈ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 19 ವಿಧಾನಸಭಾ ಕ್ಷೇತ್ರಗಳಿದ್ದು, ವಾರ್ಷಿಕ 30 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಮೊತ್ತ ಅಭಿವೃದ್ಧಿ ದೃಷ್ಟಿಯಿಂದ ಕಡಿಮೆಯಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಪ್ರಾಧಿಕಾರದ ಬಲವರ್ಧನೆಗೆ ಅತ್ಯಗತ್ಯವಾದ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 1.95 ಕೋಟಿ ರೂ. ಅನುದಾದ ಶಿರಸಿಗೆ ಲಭಿಸಿದೆ. ಇದರಿಂದ ಕೆರೆ, ರಂಗಮಂದಿರ ಇತ್ಯಾದಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಮೀನು ಮಾರುಕಟ್ಟೆ ಸ್ವಚ್ಛತೆ ಕಾಪಾಡಬೇಕು. ಮಾರುಕಟ್ಟೆ ನೀರು ಹರಿಯುವ ಪ್ರದೇಶದಲ್ಲಿ ಜನರಿಗೆ ತೊಂದರೆ ಆಗದಂತೆ ನಗರಾಡಳಿತ ಕ್ರಮವಹಿಸಬೇಕು ಎಂದು ಸೂಚಿಸಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಶಿರಸಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆ ಕೂಡ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಜನರ ಬೇಡಿಕೆ ಈಡೇರಿಸಲು ಹೆಚ್ಚುವರಿ ಮೀನು ಮಾರುಕಟ್ಟೆ ಸ್ಥಾಪಿಸಲಾಗಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಸದಸ್ಯ ಯಶವಂತ ಮರಾಠೆ, ಉಪವಿಭಾಗಾಧಿಕಾರಿ ದೇವರಾಜ ಆರ್., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಜನ್ನು ಇದ್ದರು. ನಗರಸಭೆ ಪೌರಾಯುಕ್ತ ಕೇಶವ ಚೌಗಲೆ ಸ್ವಾಗತಿಸಿದರು. ನಗರಸಭೆ ವ್ಯವಸ್ಥಾಪಕ ವೇಣುಗೋಪಾಲ ಶಾಸ್ತ್ರಿ ನಿರೂಪಿಸಿದರು.
***