ಶಿರಸಿ: ನಗರದಾದ್ಯಂತ ಹೆಚ್ಚುತ್ತಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಅತೀ ಶೀಘ್ರದಲ್ಲಿಯೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿರುವ ಎಲ್ಲಾ ವಾರ್ಡ್ ಗಳಲ್ಲಿಯೂ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮಕ್ಕಳು ಶಾಲೆಗೆ ಹೊರಟರೆ ಅವರ ಮೇಲೆ ಗುಂಪು ಗುಂಪಾಗಿ ದಾಳಿ ಮಾಡುತ್ತಿವೆ. ಸೈಕಲ್ ಇಲ್ಲವೇ ಬೈಕ್ ಮೇಲೆ ಹೊರಟರೆ ಓಡಿಸಿಕೊಂಡು ಬಂದು ಅಪಾಯ ಸೃಷ್ಟಿಸುವಂತೆ ಮಾಡುತ್ತಿವೆ. ಚಿಕನ್ ಅಂಗಡಿ, ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ನಾಯಿಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.
ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿಯ ಬಿ.ಆರ್.ಬೆಳ್ಳಿಮನೆ ಮನವಿ ಸ್ವೀಕರಿಸಿದರು. ಮಾನವ ಹಕ್ಕುಗಳ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಸಳ್ಳಿ, ರಾಜ್ಯ ಉಪಾದ್ಯಕ್ಷ ಜೂಜೆ ಡಿಸೋಜಾ, ತಾಲೂಕಾ ಅಧ್ಯಕ್ಷ ರಫಿಕ್, ಮಹಿಳಾ ಉಪಾಧ್ಯಕ್ಷೆ ಪ್ರೇಮಾ ನಾಯ್ಕ, ಕಾವೇರಿ ನಾಯ್ಕ ಮುಂತಾದವರಿದ್ದರು.