ಕಾರವಾರ: ಸಂವಿಧಾನ ಸಮರ್ಪಣಾ ದಿನವನ್ನು ಕೇಂದ್ರ ಸರ್ಕಾರ ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ತಾರತಮ್ಯದ ಜಾತಿಪದ್ಧತಿಯ ವೈಭವೀಕರಣ ದಿನವನ್ನಾಗಿ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ಸ್ವತಃ ನವೆಂಬರ್ 26, 1949ರಂದು ಸ್ವತಂತ್ರ ಭಾರತದ ಜನತೆಗೆ ಸಮರ್ಪಿಸಿದ್ದರು. ಆ ದಿನದ ನೆನಪಿಗೆ ನವೆಂಬರ್ 26ನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವವನ್ನೇ ಅಣಕಿಸುವ ರೀತಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಮತ್ತು ಸಾಮಾಜಿಕ ನ್ಯಾಯಗಳಿಗೆ ವಿರುದ್ಧವಾದ ಧೋರಣೆ ಹೊಂದಿರುವ ವೇದಗಳಲ್ಲಿಯೇ ಪ್ರಜಾಪ್ರಭುತ್ವವಿತ್ತು ಎಂಬ ಹಸಿ ಸುಳ್ಳು ಹೇಳಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಒಕ್ಕೂಟ ಸರ್ಕಾರವು ನವೆಂಬರ್ 26ನ್ನು ಭಾರತ- ಲೋಕತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಹಾಗೂ ಕೇಂದ್ರ ಕಚೇರಿಗಳು ಆಚರಿಸಬೇಕೆಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ ಸೂಚನೆಯಲ್ಲಿ ಒಮ್ಮೆಯೂ ಅಂಬೇಡ್ಕರ್ ಅವರನ್ನು ನೆನೆಯದೆ ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.