ಕಾರವಾರ: ಸಂವಿಧಾನ ತಾಯಿ ಇದ್ದ ಹಾಗೆ. ಪ್ರಜಾಪ್ರಭುತ್ವ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ವ್ಯವಸ್ಥೆ. ಸಂವಿಧಾನ ಗೌರವಿಸುವುದರ ಜತೆಗೆ ಹಕ್ಕು, ಕರ್ತವ್ಯದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಹೇಳಿದರು.
ಇಲ್ಲಿನ ಸಾಗರ ದರ್ಶನ ಸಭಾಂಗಣದಲ್ಲಿ ಆಯೋಜಿಲಾಗಿದ್ದ ಸಂವಿಧಾನ ದಿನಾಚರಣೆ ಮತ್ತು ಮೀನುಗಾರರಿಗೆ ಕಾನೂನು ಸೇವೆಗಳ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀನುಗಾರರು ಶ್ರಮಿಕ ಸಮುದಾಯದವರಾಗಿದ್ದು, ಇದೊಂದೇ ಯಶಸ್ಸು ನೀಡುವುದಿಲ್ಲ. ಇದರೊಂದಿಗೆ ಸಂಘಟನೆ, ತಿಳುವಳಿಕೆ ಕೂಡಾ ಅಗತ್ಯವಾಗಿದೆ ಎಂದು ಹೇಳಿದರು.
ದೇಶ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಇದು ಸಂತ್ರಸ್ತರಿಗೆ, ತೊಂದರೆಗೊಳಗಾದವರಿಗೆ ಉಚಿತವಾಗಿ ಕಾನೂನು ನೆರವು ನೀಡುತ್ತದೆ. ಆರ್ಥಿಕವಾಗಿ ಸಮಸ್ಯೆಯಿದ್ದಾಗ ವಕೀಲರನ್ನೂ ನೇಮಕ ಮಾಡಿಕೊಡಲಾಗುತ್ತದೆ. ವಂಚನೆಯಾಗಿದೆ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಪ್ರಾಧಿಕಾರವನ್ನು ಸಂಪರ್ಕಿಸಿದರೆ ಅಗತ್ಯ ಕಾನೂನು ಸಲಹೆ, ಸಹಕಾರ ನೀಡಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ವಿವಿಧ ತೆರನಾದ ಮೀನುಗಾರಿಕೆ ಬಂದಿದ್ದು, ಅವುಗಳನ್ನು ಮೀನುಗಾರರು ಅಳವಡಿಸಿಕೊಳ್ಳಬೇಕಿದೆ. ಹೀಗಾದಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಮೀನುಗಾರಿಕೆ ಎಂದರೆ ಮಂಗಳೂರು, ಉಡುಪಿ ಎನ್ನುವ ಮಾತಿದೆ. ಆದರೆ ಉತ್ತರ ಕನ್ನಡದ ಕರಾವಳಿ ತಾಲೂಕಿನಲ್ಲೂ ಮೀನುಗಾರಿಕೆ ಮುಖ್ಯ ಕಸುಬಾಗಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸುವಂತೆ ಆಗಬೇಕು ಎಂದರು.
ಶಿಬಿರದಲ್ಲಿ ಮೀನುಗಾರರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉಚಿತ ವೈದ್ಯಕೀಯ ತಪಾಸಣೆ ಮಾಡಲಾಯಿತು. ಮೀನುಗಾರಿಕೆ ಇಲಾಖೆಯಿಂದ ವಿದ್ಯಾನಿಧಿ ಯೋಜನೆ ನೋಂದಣಿ, ಕಂದಾಯ ಇಲಾಖೆಯಿಂದ ಆಧಾರ್ ನೊಂದಣಿ, ಚುನಾವಣೆ ಗುರುತಿನ ಚೀಟಿ ನೋಂದಣಿ ಹಾಗೂ ಪಿಂಚಣಿ ನೋಂದಣಿ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರಿಗೆ ಇ- ಶ್ರಮ್ ನೋಂದಣಿ ಹೀಗೆ ವಿವಿಧ ಯೋಜನೆ ಮತ್ತು ಸೌಲಭ್ಯಗಳನ್ನು ಸ್ಥಳದಲ್ಲಿಯೇ ಒದಗಿಸಲಾಯಿತು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಲವಾಡೆ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಗಣೇಶ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಣುಕಾ ರಾಯ್ಕರ, ನ್ಯಾಯಾಧೀಶರುಗಳಾದ ರೇಷ್ಮಾ ರೋಡ್ರಿಗಸ್, ಮಹಾಂತೇಶ ದರ್ಗದ್, ಶ್ರೀನಿವಾಸ ಪಾಟೀಲ್, ನಗರ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಸ್.ಬಿಳಗಿ, ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ವಕೀಲ ಆರ್.ಎಸ್.ಹೆಗಡೆ, ಜಿಲ್ಲಾ ಸಹಕಾರಿ ಮೀನು ಮಾರಾಟಗಾರ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ್ ಉಪಸ್ಥಿತರಿದ್ದರು.