ಸಿದ್ದಾಪುರ: ಒಂದೇ ಸೂರಿನಡಿ ಗ್ರಾಹಕರಿಗೆ, ರೈತರಿಗೆ ಎಲ್ಲ ಅಗತ್ಯ ವಸ್ತುಗಳು ಸಿಗುವ ಪ್ರಯತ್ನವನ್ನು ನೆಲೆಮಾಂವ ಸೇವಾ ಸಹಕಾರಿ ಸಂಘ ಕೈಗೊಂಡ ಪ್ರಯತ್ನ ಸ್ವಾಗತಾರ್ಹ. ಸಹಕಾರಿ ಸಂಘಗಳ ಯಶಸ್ಸಿಗೆ ಪ್ರಾಮಾಣಿಕ ಕಾರ್ಯಕರ್ತರ ಅಗತ್ಯವಿದೆ. ಸಹಕಾರ ತತ್ವ ರೈತರ ಆರ್ಥಿಕ ಉನ್ನತಿಗೆ ಹೆಚ್ಚು ಪ್ರಯೋಜನಕಾರಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಅವರು ನೆಲೆಮಾಂವ ಸೇವಾ ಸಹಕಾರಿ ಸಂಘದ 103ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಔಷಧಿ ಮಳಿಗೆ ಹಾಗೂ ಕೃಷಿ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗಿದ್ದು ಹಾಗೂ ಆಗುತ್ತಿದ್ದು, ಇದರ ಸೂಕ್ತ ಕ್ರಮಗಳನ್ನು ಅರಿತು ರೈತರು ಪ್ರಯೋಜನ ಹೊಂದಲು ಕರೆ ನೀಡಿದರು.
ಹೇರೂರು ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸ್ವಾತಿ, ಆರೋಗ್ಯದ ಕಡೆ ರೈತರು ಹೆಚ್ಚು ಗಮನ ಹರಿಸುವಂತೆ ತಿಳಿಸಿದರು. ಶಿರಸಿಯ ಬಾಬುಲಾಲ ಚೌಧರಿ, ಶುಭದಾ ಫಾರ್ಮ್ ಮಾಲೀಕ ಗಣೇಶ ಹೆಗಡೆ, ಸಾಹಿತಿ ಜಿ.ಜಿ.ಹೆಗಡೆ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನೆಲಮಾಂವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಭಟ್ಟ ಹೋಬಳಿ ಮಾತನಾಡಿ, ಸಂಘ ಕಟ್ಟುವಲ್ಲಿ ಶತಮಾನಗಳ ಕಾಲದಲ್ಲಿ ಅನೇಕರು ದುಡಿದಿದ್ದಾರೆ. ಅವರೆಲ್ಲರ ಶ್ರಮ, ನಿಷ್ಠೆ, ಕ್ರಿಯಾಶೀಲತೆಯಿಂದ ಇಂದು ಸಂಘ ಬಲಿಷ್ಠವಾಗಿದೆ. ಎಲ್ಲ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಸಿಗುವಂತೆ ಮಾಡಲಾಗಿದೆ ಎಂದರು.
ಕೃಷಿ ವಿಚಾರ ಸಂಕಿರಣದಲ್ಲಿ ಕೃಷಿ ತಜ್ಞ ಡಾ.ವಿ.ಎಂ.ಹೆಗಡೆ ಮಾತನಾಡಿ, ಅಡಿಕೆ ತೋಟಗಳಿಗೆ ನೀಡುವ ಗೊಬ್ಬರ, ಕೃಷಿ ವಿಧಾನ ಮತ್ತು ಬಸಿಗಾಲುವೆ ರಚನೆ, ಔಷಧ ಸಿಂಪರಣೆ ಕುರಿತಾದ ಮಾಹಿತಿ ನೀಡಿದರು. ಆರ್.ಎಂ.ಹೆಗಡೆ ಬಾಳೇಸರ ಹಾಗೂ ರಾಘವೇಂದ್ರ ಶಾಸ್ತ್ರಿ ಬಿಳಗಿಯವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ವಿ.ಜಿ.ಹೆಗಡೆ ಸ್ವಾಗತಿಸಿದರು. ವಿ.ಆರ್. ಗೌಡ ಇಟಗಿ ವಂದಿಸಿದರು. ನರಹರಿ ಕುಳಿಮನೆ ನಿರೂಪಿಸಿದರು.