ಕುಮಟಾ: ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಕುಮಟಾ ತಾಲೂಕಿನ ವಿವಿಧ ಗ್ರಾಮದ ಅರಣ್ಯ ಅತಿಕ್ರಮಣದಾರರಿಗೆ ಕಾನೂನಾತ್ಮಕ ನೋಟಿಸ್ ನೀಡುತ್ತಿರುವುದು ಅರಣ್ಯ ಅತಿಕ್ರಮಣದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟಾ ತಾಲೂಕಿನ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಪ್ರಾಧಿಕಾರದಿಂದ ಅತಿಕ್ರಮಣದಾರರಿಗೆ ನೋಟಿಸುಗಳು ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರರ ವೇದಿಕೆಯ ಮೇಲಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ನೀಡಿ ಅರ್ಜಿ ವಿಚಾರಣೆ ಹಂತದಲ್ಲಿ ಅರಣ್ಯ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸಲು ಅವಕಾಶ ಇಲ್ಲದಿದ್ದಾಗಲೂ ಹಾಗೂ ಕೇಂದ್ರ ಸರಕಾರವೂ ಅರಣ್ಯ ಹಕ್ಕು ಕಾಯಿದೆಯಲ್ಲಿ ಸಲ್ಲಿಸಿದ ಅರ್ಜಿ ಪುನರ್ ಪರಿಶೀಲಿಸಲಾಗುತ್ತಿದ್ದು, ಅರ್ಜಿ ವಿಲೇವಾರಿ ಆಗುವವರೆಗೂ ಒಕ್ಕಲೆಬ್ಬಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ವಾಘ್‌ದಂಡನೆ ನೀಡಿದಾಗಿಯೂ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುತ್ತಿರುವುದು ಖೇದಕರ ಎಂದು ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದ್ದಾರೆ.
ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯ:
ಕುಮಟಾ ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆಗೆ ನೋಟಿಸ್ ಜಾರಿ ಮಾಡುತ್ತಿರುವುದು ಕಾನೂನು ಬಾಹಿರ. ಇಂತಹ ನೋಟಿಸ್‌ಗಳನ್ನ ಅರಣ್ಯ ಅತಿಕ್ರಮಣದಾರರಿಗೆ ಜಾರಿ ಮಾಡುತ್ತಿರುವುದು ಖಂಡನಾರ್ಹ. ತಕ್ಷಣ ಕಾನೂನು ಬಾಹಿರ ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಧಗಿತಗೊಳಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.