ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾರಿಗೆ ಇಲಾಖೆಯ ವಿಭಾಗೀಯ ಕಛೇರಿ ಆವರಣದಲ್ಲಿ ಜರುಗಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಕನ್ನಡಿಗರಿಂದಲೇ ಆಗಬೇಕು. ನವೆಂಬರ್ ತಿಂಗಳು ಮಾತ್ರ ಕನ್ನಡದ ತಿಂಗಳಲ್ಲ. ವರ್ಷವಿಡೀ ಕನ್ನಡ ಸಂಭ್ರಮ ಪ್ರತಿ ಮನೆಯಲ್ಲಿಯೂ ನಡೆಯಬೇಕು. ಆಗ ಮಾತ್ರ ಕನ್ನಡದ ಉಳಿವು. ಇಲ್ಲದಿದ್ದರೆ ಜಗತ್ತಿನ ಅದೆಷ್ಟೋ ಪುರಾತನ ಭಾಷೆ ಕಣ್ಮರೆಯಾದಂತೆ ಕನ್ನಡವು ಆಗಬಹುದು. ಹಾಗಾಗದಂತೆ ನೋಡಿಕೊಳ್ಳಲು ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸಲೇಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ ಕೆ.ಎಸ್., ಬೆಂಗಳೂರಿನಲ್ಲಿ ನಾವು ನೃಪತುಂಗ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚಿನ ಮೊತ್ತದಲ್ಲಿನೀಡುತ್ತೇವೆ. ಕನ್ನಡಿಗರು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಆದರೆ, ಕನ್ನಡತನ ಮರೆತಿದ್ದೇವೆ. ಯಾವುದೇ ಭಾಷೆ ಮಾತನಾಡಿದರೂ ಪ್ರತಿ ವ್ಯಕ್ತಿ ಚಿಂತಿಸುವುದು ಮಾತೃಭಾಷೆಯಲ್ಲೇ ಹಾಗಾಗಿ ಕನ್ನಡತನವನ್ನು ಮನೆಯಲ್ಲಿ ಬೆಳೆಸಬೇಕು ಎಂದರು.
ಈ ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಸಹದೇವಪ್ಪ ನಡಗೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಎಸ್.ಸದಾನಂದ, ಬಾಲ ಪ್ರತಿಭೆ ಅದ್ವೈತ ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಾರಿಗೆ ಸಿಬ್ಬಂದಿಗಳ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರಿಯಾ ಸಮಿತಿ ಸದಸ್ಯ ಮಂಜುನಾಥ ಶೇಟ್ ಮತ್ತು ಪ್ರಕಾಶ್ ನಾಯ್ಕ ಸ್ವಾಗತಿಸಿದರು. ಮಿಥುನ್ ನಾಯ್ಕ ವರದಿ ವಾಚಿಸಿದರು. ಟಿ.ಎಂ.ಚಂದ್ರಶೇಖರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾರಿಗೆ ಸಿಬ್ಬಂದಿಗಳಿಂದ ‘ಕತ್ತಲೆ ರಾಜ್ಯದ ತಿರ್ಸಟ್ ರಾಜ’ ನಾಟಕ ಪ್ರದರ್ಶನ ನಡೆಯಿತು. ಸಿಬ್ಬಂದಿ ಭೋಜರಾಜ ಶಿರಾಲಿ ಅವರಿಂದ ಸಂಗೀತ ಕಾರ್ಯಕ್ರಮ ಸಹ ನಡೆಯಿತು.