ಶಿರಸಿ: ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ ಮತ್ತು ಶಬರ (ರಿ) ಸೋಂದಾ ಇವರ ಸಂಯುಕ್ತಾಶ್ರಯದಲ್ಲಿ , ನ. 25ರಂದು ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಪ್ರಾತಿನಿಧಿಕ ಕಲೆಯಾದ ಯಕ್ಷಗಾನ ತರಬೇತಿ ಶಿಬಿರವನ್ನು ಯಕ್ಷಗಾನದ ಸಂಪ್ರದಾಯದಂತೆ ಚಂಡೆ ವಾದನದ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಲೋಕದ್ವನಿ ದಿನಪತ್ರಿಕೆಯ ನ್ಯೂಸ್ ಎಡಿಟರ್ ಹಾಗೂ ದೂರದರ್ಶನ ಜಿಲ್ಲಾ ವರದಿಗಾರರಾದ ಶ್ರೀಮತಿ ವಿನುತಾ ಹೆಗಡೆ ಮಾತನಾಡಿ, ಗೆಜ್ಜೆಪೂಜೆಯಂತಹ ಅನಿಷ್ಟ ಪದ್ದತಿಯನ್ನು ತೊಡೆದು ಹಾಕುವಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದು. ಯಕ್ಷಗಾನ ಕಲಿಕೆ ಶಿಕ್ಷಣದ ಮೌಲ್ಯ ಹೆಚ್ಚಿಸುತ್ತದೆ, ಸಂಸ್ಕೃತಿಯನ್ನು ಬೆಳೆಸುತ್ತದೆ.. ಇಂದಿನಿಂದ ತಾನು ಕೂಡ ಯಕ್ಷಗಾನದ ವಿದ್ಯಾರ್ಥಿ ಆಗುತ್ತೇನೆ. ಎಂದು ಸಂತಸದಿಂದ ಹೇಳಿಕೊಂಡರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ವಿಜಯ ಕರ್ನಾಟಕದ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡುತ್ತಾ , ಯಕ್ಷಗಾನ ಕಲೆಗೆ ಸಮೃದ್ಧತೆ ಆಪ್ತತೆ ಇದೆ.ಸಂಸ್ಕೃತಿ, ಸಂಸ್ಕಾರ ಸಾರುವ ಕಲೆಯಾದ ಯಕ್ಷಗಾನದ ಕುರಿತು ಒಂದೊಮ್ಮೆ ಆತಂಕ ಇತ್ತು. ಪ್ರಸ್ತುತ ಪಾರಂಪರಿಕ ಕಲೆಗಳ ಕಲಿಕೆಯ ಕುರಿತು ಆಸಕ್ತ ವಹಿಸುವ ಹೊಸ ಪರಂಪರೆ ಆರಂಭವಾಗಿದೆ. ಪಾಲಕರು ಈ ಕುರಿತು ಆಸಕ್ತಿ ವಹಿಸುತ್ತಿದ್ದಾರೆ. ಜನಮಾನಸದ ನಾಡಿ ಮಿಡಿತ ಅರಿತು ತರಬೇತಿಯನ್ನು ನೀಡಲು ಮುಂದಾಗಿರುವ ಲಯನ್ಸ್ ಶಾಲೆಯ ಬಗ್ಗೆ ಹೆಮ್ಮೆ ಇದೆ ಎಂದರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲ.ಪ್ರೊ. ರವಿನಾಯಕ್, ಇಂದಿನ ಮುಂದುವರೆಯುತ್ತಿರುವ ಜಗತ್ತಿನಲ್ಲಿ ತಾಂತ್ರಿಕತೆಯ ಜೊತೆ ಜೊತೆಗೆ ಸಾಂಪ್ರದಾಯಿಕ ಕಲೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸರ್ವಾಂಗೀಣ ವಿಕಸನ ಆಗಲೇಬೇಕಾದ ಅನಿವಾರ್ಯವಿದೆ. ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಲು ಯಕ್ಷಗಾನದಂತಹ ಕಲೆ ನೆರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರು ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಲ.ಪ್ರೊ.ಎನ್.ವಿ.ಜಿ.ಭಟ್ ಮಾತನಾಡುತ್ತಾ “ಮಕ್ಕಳು ಎಲ್ಲಾ ಕಲೆಗಳಲ್ಲೂ ಜ್ಞಾನವನ್ನು ಹೊಂದಿರಬೇಕು. ನಮ್ಮ ಶಾಲೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳೆಲ್ಲ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಎಲ್ಲ ರಂಗದಲ್ಲೂ ನಿಪುಣರಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ಶಾಲೆಯ ಮುಖ್ಯೋ ಪಾಧ್ಯಾಯ ಶಶಾಂಕ್ ಹೆಗಡೆ ಇವರು ತಮ್ಮ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳಲ್ಲಿ , ಹೊಸ ಶಿಕ್ಷಣ ನೀತಿಯ ಅನ್ವಯ ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತವಾಗಿ ಪರಿಪೂರ್ಣರಾಗಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಬರ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಶಿಬಿರದ ತರಬೇತುದಾರ ನಾಗರಾಜ್ ಜೋಶಿ ವಂದನಾರ್ಪಣೆಯನ್ನು ನೆರವೇರಿಸಿದರು.ಆರನೇ ತರಗತಿಯ ವಿದ್ಯಾರ್ಥಿಗಳಾದ ಕು. ಚಿನ್ಮಯ ಕೆರೆಗದ್ದೆ ಮತ್ತು ಕು. ಪ್ರಥಮ ಹೆಗಡೆ ಇವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು. ಭಾಗವತರಾದ ಶ್ರೀಪಾದ ಹೆಗಡೆ ಬಾಳೆಗದ್ದೆ ಇವರ ಭಾಗವತಿಕೆಯಲ್ಲಿ, ನಾಗರಾಜ ಜೋಶಿ ಮದ್ದಲೆಯಲ್ಲಿ,ಶ್ರೀಪತಿ ಹೆಗಡೆ ಕಂಚಿಮನೆ ಚಂಡೆಯಲ್ಲಿ ಯಕ್ಷಗಾನೀಯ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು
ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.