ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಹಾಗೂ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಷಾಲಿಟಿ ಆರೋಗ್ಯ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ನ.27ರಂದು ಬೆಳಿಗ್ಗೆ 9ರಿಂದ ಸಂಜೆ 4.30 ಗಂಟೆಯವರೆಗೆ ಕಾಗದ ಕಾರ್ಖಾನೆಯ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ 12 ವರ್ಷದೊಳಗಿನ ಚಿಕ್ಕಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಹೇಳಿದರು.
ಅವರು ಬುಧವಾರ ಕಾಗದ ಕಾರ್ಖಾನೆಯ ಸ್ಪೋರ್ಟ್ಸ್ & ವೆಲ್ಫೇರ್ ವಿಭಾಗದ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಈ ಶಿಬಿರದಲ್ಲಿ ಖ್ಯಾತ ಮಕ್ಕಳ ತಜ್ಞರಾದ ಡಾ.ರಾಜನ್ ದೇಶಪಾಂಡೆ ಸೇರಿದಂತೆ 17 ತಜ್ಞ ವೈದ್ಯರುಗಳು ಭಾಗವಹಿಸಲಿದ್ದು, ಈ ಶಿಬಿರದ ಪ್ರಯೋಜವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ರಾಜೇಶ್ ತಿವಾರಿಯವರು ತಿಳಿಸಿದ್ದಾರೆ. ನ.27ರಂದು ಬೆಳಿಗ್ಗೆ 8 ಗಂಟೆಗೆ ಕಾಗದ ಕಾರ್ಖಾನೆಯ ಶ್ರೀರಂಗನಾಥ ಸಭಾಭವನದಲ್ಲಿ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಷಾಲಿಟಿ ಆರೋಗ್ಯ ಕೇಂದ್ರದ ಡಾ.ಕೆ.ಎಂ.ಪ್ರಭು ಪ್ರಸಾದ್ ಶಿಬಿರದ ಪ್ರಯೋಜನಗಳ ಬಗ್ಗೆ ವಿವರಿಸಿದರು.