ಅಂಕೋಲಾ: ಶೈಕ್ಷಣಿಕ ಜೀವನದಲ್ಲಿ ತಮ್ಮ ವ್ಯಕ್ತಿತ್ವವನ್ನು ಮೌಲ್ಯಯುತವಾಗಿ ನಿರ್ಮಿಸಿಕೊಂಡು, ಶಿಸ್ತು, ತಾಳ್ಮೆ, ಅಹಿಂಸೆಯ ಗುಣಧರ್ಮ ಬೆಳೆಸಿಕೊಂಡು ಶ್ರೇಷ್ಠ ನಾಗರಿಕನಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು.
ಅವರು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಕೇವಲ ತಮ್ಮ ಹಕ್ಕುಗಳನ್ನ ಪ್ರತಿಪಾದಿಸದೆ ಕರ್ತವ್ಯದ ಜವಾಬ್ದಾರಿಯನ್ನು ನಿರಂತರ ಕಲಿಕೆ ಹಾಗೂ ಚಿಂತನೆಗಳ ಮೂಲಕ ರೂಢಿಸಿಕೊಳ್ಳಬೇಕು. ರಾಷ್ಟ್ರಕ್ಕೆ ಹಿತವಾಗುವ ವೃತ್ತಿಯನ್ನು ಆಯ್ದು ಶ್ರೇಷ್ಠ ಸಮಾಜದ ನಿರ್ಮಾತೃನಾಗಬೇಕು. ಶ್ರೇಷ್ಠ ನಾಗರಿಕರನ್ನು ಶಾರೀರಿಕವಾಗಿ ಮಾನಸಿಕವಾಗಿ ಸೃಷ್ಠಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ. ಸಮೂಹ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ, ಶಿಸ್ತು, ಸಮಯಪ್ರಜ್ಞೆ, ಬದ್ಧತೆ, ಸ್ವಚ್ಛತೆ ಹಾಗೂ ಇತರರಿಗೆ ತೊಂದರೆ ಕೊಡದಂತೆ ಜೀವಿಸುವವನೇ ಉತ್ತಮ ನಾಗರಿಕನಾಗಿದ್ದು ಕೇವಲ ಆಸ್ಥಿಹೊಂದಿರುವವನ್ನು ಮಾತ್ರ ಯಶಸ್ವಿ ವ್ಯಕ್ತಿಯಾಗಲಾರ ಬದಲಾಗಿ ಸಮಗ್ರತೆ, ಗೌರವಯುತವಾಗಿ ಮಾಡಿದ ಸಾಧನೆ ಅವರನ್ನು ಯಶಸ್ವಿ ನಾಗರಿಕರನ್ನಾಗಿ ಮಾಡುವದು ಎಂದರು.
ಕಾರ್ಯಕ್ರಮದಲ್ಲಿ ಕುಮಾರಿ ಗ್ಲೋರಿಯಾ ಸಂಗಡಿಗರು ಪ್ರಾರ್ಥಿಸಿದರು, ಅಕ್ಷತಾ ನಾಯಕ ಸ್ವಾಗತಿಸಿದರು, ವೈಶಾಲಿ ಗುನಗಿ ಪರಿಚಯಿಸಿದರು. ವೇದಿಕೆಯಲ್ಲಿ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ, ಎನ್‌ಎಸ್‌ಎಸ್ ಅಧಿಕಾರಿ ರಾಘವೇಂದ್ರ ಅಂಕೋಲೆಕರ, ಪ್ರಧಾನ ಕಾರ್ಯದರ್ಶಿ ಶ್ರದ್ಧಾ ನಾಯಕ ಹಾಗೂ ಸಿಟಿಸಿ ಕಾರ್ಯದರ್ಶಿ ಚೇತನ ಜಿ.ಎನ್. ಉಪಸ್ಥಿತರಿದ್ದರು. ದಿಶಾ ನಾಯಕ ವಂದಿಸಿದರು. ರಶಿಕಾ ನಾಯಕ ನಿರೂಪಿಸಿದರು.