ದಾಂಡೇಲಿ: ಆರು ತಿಂಗಳ ಹಿಂದೆ ಅಪ್ರಾಪ್ತ ಬಾಲಕನ ಮೇಲಿನ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪಾದಿತನಾದ ನಿರ್ಮಲನಗರದ ಜನತಾ ಕಾಲೋನಿ ನಿವಾಸಿ ಹರೀಶ್ ಬಿ.ಮೋರೆಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ.1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಜೊತೆಗೆ ನೊಂದ ಬಾಲಕನಿಗೆ ರೂ.3 ಲಕ್ಷ ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದಾರೆ.
ಅಪ್ರಾಪ್ತ ಬಾಲಕನ ಮೇಳೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಮೇ 12ರಂದು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 377, 506 ಐಪಿಸಿ ಮತ್ತು ಕಲಂ: 4, 6 ಪೋಕ್ಸೋ ಕಾಯ್ದೆಯಡಿ ಪಿಎಸೈ ಕಿರಣ್ ಪಾಟೀಲ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅಂದಿನ ಸಿಪಿಐ ದಯಾನಂದ ಅವರು ತನಿಖೆ ಕೈಗೊಂಡು ಸಹಾಯಕ ಸಿಬ್ಬಂದಿ ಮಂಜುನಾಥ ಶೆಟ್ಟಿಯವರ ಸಹಕಾರದಿಂದ ಕೇವಲ 19 ದಿನಗಳಲ್ಲಿ ಎಲ್ಲಾ ಸಾಕ್ಷಿ ಪುರಾವೆಗಳನ್ನು, ದಾಖಲಾತಿಗಳನ್ನು ಸಂಗ್ರಹಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಕೈಗೊಂಡು ಕೇವಲ 6 ತಿಂಗಳಿನಲ್ಲಿ ಅಪಾದಿತನಿಗೆ ಶಿಕ್ಷೆಯನ್ನು ವಿಧಿಸಿದೆ.
ವಿಶೇಷ ಸರಕಾರಿ ವಕೀಲರಾದ ಶುಭಾ ಆರ್.ಗಾಂವಕರ ಸರಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದು, ನಗರ ಠಾಣೆಯ ಎಎಸೈ ನೀಲಕಂಠ ಆಚಾರಿಯವರು ಎಲ್ಲಾ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕ್ಷಿ ನುಡಿಯುವಂತೆ ಮಾಡಿದ್ದರು. ಈ ಪ್ರಕರಣದಲ್ಲಿ ತ್ವರಿತಗತಿಯಲ್ಲಿ ತೀರ್ಪು ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮತ್ತು ವಿಶೇಷ ಸರಕಾರಿ ವಕೀಲರಾದ ಶುಭಾ ಆರ್.ಗಾಂವಕರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.