Slide
Slide
Slide
previous arrow
next arrow

ಕನ್ನಡ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕಂಕಣಬದ್ಧರಾಗಿರಬೇಕು: ದೇಶಪಾಂಡೆ

300x250 AD

ದಾಂಡೇಲಿ: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಕನ್ನಡವನ್ನು ಸಮೃದ್ಧಗೊಳಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಕನ್ನಡ ಕಟ್ಟುವ ಕಾರ್ಯದಲ್ಲಿ ನಾವು ನೀವೆಲ್ಲರೂ ಕಂಕಣಬದ್ಧರಾಗಿರಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ನಗರದ ಹಳೆ ನಗರಸಭೆಯ ಕಟ್ಟಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಭವನ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಅವರು, ದಾಂಡೇಲಿಯಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಉಚಿತವಾಗಿ ಜಾಗ ನೀಡಲು ನಗರಸಭೆಯಿಂದ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರಿಗೆ ತಿಳಿಸಿದರು. ನಮ್ಮ ಮಾತೃಭಾಷೆಯನ್ನು ಅತ್ಯಂತ ಪ್ರೀತ್ಯಾದರಗಳಿಂದ ಗೌರವಿಸುವ ಗುಣ ಸಂಸ್ಕೃತಿ ನಮ್ಮದಾಗಬೇಕು. ಭಾಷಾಭಿಮಾನವಿದ್ದಾಗ ಭಾಷೆ ಬೆಳೆಯುವುದರ ಜೊತೆಗೆ ನಾಡು ಸಮೃದ್ಧವಾಗಲು ಸಾಧ್ಯ. ಮುಂದಿನ ತಿಂಗಳು ಜೊಯಿಡಾ ತಾಲೂಕಿನ ಉಳವಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯವು ದಾಂಡೇಲಿಯಲ್ಲಿ ಆರಂಭವಾಗಿರುವುದು ಇಡೀ ದಾಂಡೇಲಿಗೆ ಹೆಮ್ಮಯ ಸಂಗತಿ. ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಹಿಂದೆ ಅರಸರ ಕಾಲದಲ್ಲಿ ಕವಿ, ಕಲಾವಿದರು, ಸಾಹಿತಿಗಳಿಗೆ ರಾಜಾಶ್ರಯದ ಪರಂಪರೆಯಿತ್ತು. ಅದೇ ರೀತಿ ಕವಿ, ಕಲಾವಿದರುಗಳಿಗೆ, ಸಾಹಿತಿಗಳಿಗೆ ಶಾಸಕರಾದ ಆರ್.ವಿ. ದೇಶಪಾಂಡೆ ರಾಜಾಶ್ರಯ ನೀಡುವ ಮೂಲಕ ಕನ್ನಡ ಬೆಳೆಸುವ ಹಾಗೂ ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ನಡೆಯುವಂತಾಗಲೂ ಶಾಸಕರಾದಿಯಾಗಿ ಹಕ್ಕೊತ್ತಾಯ ಮಾಡಬೇಕೆಂದು ವಿನಂತಿಸಿದರು. ಜಿಲ್ಲಾ ಕಸಾಪ ಕಾರ್ಯಾಲಯಕ್ಕೆ ಕೊಠಡಿ ವ್ಯವಸ್ಥೆಯ ಬೇಡಿಕೆ ಇಟ್ಟ ತಕ್ಷಣವೇ ನಗರಸಭೆಗೆ ನಿದೇರ್ಶನವನ್ನು ನೀಡಿದ ಶಾಸಕ ದೇಶಪಾಂಡೆಯವರ ಕನ್ನಡ ಕಾಳಜಿಗೆ ಮತ್ತು ನಗರಾಡಳಿತದ ಕನ್ನಡದ ಸೇವಾ ಕೈಂಕರ್ಯಕ್ಕೆ ಮತ್ತು ಕಾರ್ಯಾಲಯಕ್ಕೆ ಬೇಕಾದಂತಹ ಎಲ್ಲ ಅವಶ್ಯಕತೆಗಳನ್ನು ಪೂರೈಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ವಕೀಲರ ಸಂಘದ ಅಧ್ಯಕ್ಷ ವಿ.ಆರ್.ಹೆಗಡೆ, ನಗರಸಭಾ ಸದಸ್ಯರುಗಳಾದ ಮೋಹನ ಹಲವಾಯಿ, ನರೇಂದ್ರ ಚೌವ್ಹಾಣ್ ಹಾಗೂ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷರಾದ ಮುರ್ತುಜಾ ಹುಸೇನ್ ಆನೆಹೂಸೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರು ಸೇರಿದಂತೆ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಮಾನಸಾ ವಾಸರೆ ಹಾಗೂ ಸಂಗಡಿಗರು ಪ್ರಾರ್ಥಿಸಿದ ಕಾರ್ಯಕ್ರಮಕ್ಕೆ ಪಿ.ಆರ್.ನಾಯ್ಕ ಸ್ವಾಗತಿಸಿದರು. ಮುರ್ತುಜಾ ಹುಸೇನ್ ಆನೆಹೂಸೂರ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top