ಅಂಕೋಲಾ: ಕಾರವಾರ- ಅಂಕೋಲಾ ಕ್ಷೇತ್ರದ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ದೊರೆಯುವಂತಾಗಿ, ನನ್ನ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ ಯೋಜನೆಯಲ್ಲಿ ಪುರಸಭೆ ವ್ಯಾಪ್ತಿಯ 6.5 ಕೋಟಿ ರೂ. ವೆಚ್ಚದ 15 ರಸ್ತೆ ಕಾಮಗಾರಿಗಳಿಗೆ ಏಕಕಾಲದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಈವರೆಗೆ ಮೂಲಭೂತ ಸೌಕರ್ಯದ ಕೊರತೆ ಇರುವ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಯುವ ಜನರಿಗೆ ಉದ್ಯೋಗ ಸೃಷ್ಟಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು. ಅಲ್ಲದೆ ಕೋಟ್ಯಾಂತರ ರೂಪಾಯಿ ಅನುದಾನ ತರುವ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಮಗಾರಿಗಳು ನಡೆಯುವಾಗ ಅಲ್ಲಿನ ಸಾರ್ವಜನಿಕರೂ ಗಮನ ಹರಿಸಿದರೆ ಕಳಪೆ ಕಾಮಗಾರಿ ಆಗುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಅವರ ದೂರದೃಷ್ಟಿಯ ಯೋಚನೆಗಳಿಂದ ಅಂಕೋಲಾ ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು. ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ಸದಸ್ಯರುಗಳಾದ ಜಯಾ ನಾಯ್ಕ, ವಿಶ್ವನಾಥ ನಾಯ್ಕ ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮುಖ್ಯಾಧಿಕಾರಿ ಎನ್. ಎಂ.ಮೇಸ್ತ, ಗುತ್ತಿಗೆದಾರ ವಿಜಯಾನಂದ ಶೆಟ್ಟಿ, ಪುರಸಭೆಯ ವಿವಿಧ ವಾರ್ಡುಗಳ ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತ ಸುಭಾಷ ಕಾರೇಬೈಲ್ ಕಾರ್ಯಕ್ರಮ ನಿರ್ವಹಿಸಿದರು.
6.50 ಕೋಟಿ ಕಾಮಗಾರಿಗೆ ಭೂಮಿಪೂಜೆ
ರಾಷ್ಟ್ರೀಯ ಹೆದ್ದಾರಿಯಿಂದ ಶಿರಕುಳಿ ಮುಖ್ಯರಸ್ತೆ ಸೇರುವಲ್ಲಿ ಮರು ಡಾಂಬರೀಕರಣ 150 ಲಕ್ಷಗಳು, ಕೇಣಿ ಪ್ರಾಥಮಿಕ ಶಾಲೆ ಹಿಂಬದಿ ಸೇರುವ ರಸ್ತೆ ಕಾಂಕ್ರಿಟೀಕರಣ 20 ಲಕ್ಷ, ವಾರ್ಡ್ ನಂ.2ರ ಸುಬ್ರಾಯ ನಾಯ್ಕ ಅವರ ಮನೆಯಿಂದ ದಿನೇಶ ನಾಯ್ಕ ಮನೆಯ ತನಕ ರಸ್ತೆ ನಿರ್ಮಾಣ 13 ಲಕ್ಷ, ಅಜ್ಜಿಕಟ್ಟಾ ರಸ್ತೆಯನ್ನು ಅಗಲೀಕರಣ ಮಾಡಿ ಇಂಟರ್‌ಲಾಕ್ ಅಳವಡಿಸುವುದು 20 ಲಕ್ಷ, ಹೊನ್ನೆಕೇರಿ ಬ್ರಿಜ್‌ನಿಂದ ಮುಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ 15 ಲಕ್ಷ, ರಥಬೀದಿ ಸೇರುವ ರಸ್ತೆಯ ಮರುಡಾಂಬರೀಕರಣ 38 ಲಕ್ಷ, ನಗರದ ಸ್ಮಶಾನ ರಸ್ತೆ ನಿರ್ಮಾಣ 17 ಲಕ್ಷ, ಬೊಬ್ರುವಾಡ ಮಾಲಾ ದೇವಸ್ಥಾನ ಸೇರುವ ರಸ್ತೆಯಲ್ಲಿ ಕಾಂಕ್ರಿಟೀಕರಣ 26.50 ಲಕ್ಷ, ಮಠಾಕೇರಿ ಹೊಸ ಬಡಾವಣೆ ಸೇರುವ ಕೊನೆಯ ಭಾಗದ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ 22.50 ಲಕ್ಷ, ವಂದಿಗೆ ಪ್ರದೇಶದ ಕ್ರಾಸ್ ರಸ್ತೆಗಳಿಗೆ ಕಾಂಕ್ರಿಟೀಕರಣ 25 ಲಕ್ಷ, ಕಿತ್ತೂರು ಚೆನ್ನಮ್ಮ ರಸ್ತೆ ಪಶ್ಚಿಮ ಕರಾವಳಿ ರಸ್ತೆಯಿಂದ ನರಸಿಂಹ ದೇವಸ್ಥಾನ ಹಾಗೂ ಬಂಡಿಕಟ್ಟೆಯಿAದ ಕಂತ್ರಿ ರಸ್ತೆ ಸುಧಾರಣೆ 89 ಲಕ್ಷ, ಅಂಕೋಲಾ ಕೇಣಿ ಸಾಯಿಮಂದಿರ ರಸ್ತೆ ನಿರ್ಮಾಣ 27 ಲಕ್ಷ, ಲಕ್ಷ್ಮೇಶ್ವರ ದತ್ತಾತ್ರೆಯ ದೇವಸ್ಥಾನ ರಸ್ತೆ ನಿರ್ಮಾಣ 22 ಲಕ್ಷ,ಪೂಜಗೇರಿ ಸೇತುವೆಯಿಂದ ಬೆಳಂಬಾರ ಕ್ರಾಸ್ ತನಕ ರಸ್ತೆ ನಿರ್ಮಾಣ 51 ಲಕ್ಷ, ಬೇಳಾಬಂದರ ಮುಖ್ಯ ರಸ್ತೆಯಿಂದ ಕನಸಿಗದ್ದೆ ಸೇರುವ ಪ.ಜಾತಿಯ ಬಡಾವಣೆ ಸೇರುವ ರಸ್ತೆಯ ಅಭಿವೃದ್ಧಿಗೆ 23 ಲಕ್ಷ, ಚರಂಡಿ 18 ಲಕ್ಷ, ಒಟ್ಟು 6 ಕೋಟಿ 50 ಲಕ್ಷ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಿಲಾನ್ಯಾಸ ನೆರವೇರಿಸಿದರು.