ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೀನುಗಾರರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮೀನುಗಾರರು ನಗರದಲ್ಲಿ ಬೃಹತ್ ರ‍್ಯಾಲಿ ನಡೆಸಿದರು.
ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಬೃಹತ್ ರ‍್ಯಾಲಿಯು ಕೋಡಿಬೀರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ಮೆರವಣಿಗಯಲ್ಲಿ ಟ್ಯಾಬ್ಲೋಗಳ ಕುಣಿತ, ಮೀನುಗಾರರು ದೋಣಿ ನಡೆಸುವ ಮತ್ತು ಬಲೆ ಹಾಕುವ, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ರೂಪಕಗಳು ಎಲ್ಲರ ಗಮನ ಸೆಳೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಮೆರವಣಿಗೆ ಮೂಲಕ ಜಮಾವಣೆಗೊಂಡ ಮೀನುಗಾರರು, ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು. ಈ ವೇಳೆ, ಬಂಡವಾಳ ಆಕರ್ಷಿಸುವ ಭರಾಟೆಯಲ್ಲಿ, ಪರಂಪರಾಗತ ಮೀನುಗಾರರ ಹಿತಕ್ಕೆ ಮಾರಕವಾದ ಮತ್ತು ಮೀನುಗಾರಿಕೆ ನೀತಿಗೆ ವಿರುದ್ಧವಾಗಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ ಜಿಲ್ಲೆಯ ಸುಂದರ ಕಡಲತೀರಗಳು, ಜೀವ ವೈವಿಧ್ಯತೆ ನಾಶವಾಗಲಿದೆ. ಇದರಿಂದ ಮುಂದೆ ಮೀನುಗಾರಿಕಾ ಉದ್ಯಮವೇ ಕುಸಿಯುವ ಭೀತಿ ಇದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇನ್ನು ಹೊನ್ನಾವರ- ಕಾಸರಕೋಡಿನ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯಿಂದ ಪರಿಸರದ ಜೊತಡಗೆ ಮೀನುಗಾರರ ಜೀವನೋಪಾಯಕ್ಕೆ ಧಕ್ಕೆಯಾಗಲಿರುವ ಕಾರಣ ಯೋಜನೆ ಕೈಬಿಡಬೇಕು. ಕಾರವಾರದಿಂದ ಅಂಕೋಲಾವರೆಗಿನ ಹೆಚ್ಚಿನ ಕಡಲತೀರಗಳು ನೌಕಾನೆಲೆ ಮತ್ತು ಮೂರು ಬೃಹತ್ ವಾಣಿಜ್ಯ ಬಂದರುಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಹೀಗಿರುವಾಗ ಜಿಲ್ಲೆಯ ಇನ್ನುಳಿದ ಸುಂದರ ಕಡಲತೀರಗಳನ್ನು ಲೀಸ್ ಹೆಸರಿನಲ್ಲಿ ಖಾಸಗಿಯವರಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಮೀನುಗಾರಿಕೆ ಬಂದರುಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮತ್ತು ಹೂಳನ್ನು ಕಾಲಕಾಲಕ್ಕೆ ತೆಗೆಯಲು ನಿರಂತರ ಶಾಸ್ವತ ವ್ಯವಸ್ಥೆ ಜಾರಿಗೆ ತರಬೇಕು. ಮೀನುಗಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಪ್ರತಿ ವರ್ಷ 200 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ, ಮೀನುಗಾರ ಸಮುದಾಯಗಳ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಎಂಎಲ್‌ಸಿ ಗಣಪತಿ ಉಳ್ವೇಕರ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್, ಜಿಲ್ಲಾಧ್ಯಕ್ಷ ಗಣಪತಿ ಮಾಂಗ್ರೆ, ಜಿಲ್ಲಾ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಮೀನುಗಾರರ ವಿವಿಧ ಸಂಘಟನೆಗಳ ವೇದಿಕೆ ಸಂಚಾಲಕ ವಿಕಾಸ್ ತಾಂಡೇಲ, ಕಡಲ ವಿಜ್ಞಾನಿ ಪ್ರಕಾಶ ಮೇಸ್ತ, ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಾಜು., ಅಂಕೋಲಾದ ರಾಜು ಹರಿಹಂತ್ರ, ಪತ್ರಕರ್ತ ಟಿ.ಬಿ. ಹರಿಕಂತ್ರ ಸೇರಿದಂತೆ ನೂರಾರು ಮಂದಿ ಇದ್ದರು.