ಹಳಿಯಾಳ: ಪಟ್ಟಣಕ್ಕೆ ಹೆಚ್ಚಿನ ಕಬ್ಬು ಕಟಾವು ಗ್ಯಾಂಗ್‌ಗಳನ್ನು ನೀಡಬೇಕು ಹಾಗೂ ಅವರು ಹೆಚ್ಚುವರಿ ಹಣ ಲಗಾನಿ ಪಡೆಯಬಾರದು ಎಂದು ಆಗ್ರಹಿಸಿ ಪಟ್ಟಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಬ್ಬಿಗೆ ಉತ್ತಮ ಬೆಲೆ ನೀಡಬೇಕು, ಕಟಾವು ಮತ್ತು ಸಾಗಾಣೆ ವೆಚ್ಚ ಪರಿಷ್ಕರಣೆ, ಹಳೆ ಬಾಕಿ ಪಾವತಿ, ಆದ್ಯತೆ ಪಟ್ಟಿಯಂತೆ ಕಟಾವು ಕಾರ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರ ಸಂಘದವರು ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಡದೆ ಸುಮಾರು 45 ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆಸಿದ್ದರು. ಬಳಿಕ ಸರ್ಕಾರದ ಮಧ್ಯೆ ಪ್ರವೇಶದಿಂದ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 150 ರೂ. ಬೋನಸ್ ನೀಡುವುದಾಗಿ ಘೋಷಿಸಿದ್ದರಿಂದ ಕಾರ್ಖಾನೆ ಆರಂಭಿಸಲು ಅನುಮತಿ ನೀಡಿದ ಬಳಿಕ ನ.10ರಿಂದ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಿದೆ.
ಆದರೆ ಹಳಿಯಾಳ ಕ್ಷೇತ್ರಕ್ಕೆ ಕಬ್ಬು ಕಟಾವು ಗ್ಯಾಂಗ್‌ಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಇರುವ ಗ್ಯಾಂಗ್‌ಗಳು ಹೆಚ್ಚಿನ ಲಗಾನಿ ಪಡೆದು ರೈತರನ್ನು ಲೂಟಿ ಮಾಡುತ್ತಿದ್ದಾರೆ. ಸ್ವಂತ ಕಟಾವಿಗೆ ಪರವಾನಗಿ ನೀಡಬೇಕು ಸೇರಿ ಇನ್ನೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಹಳಿಯಾಳಕ್ಕೆ ಜಿಲ್ಲಾಧಿಕಾರಿಗಳು ಬಂದು ರೈತರು ಮತ್ತು ಕಾರ್ಖಾನೆಯವರ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಭಾನುವಾರ ರಾತ್ರಿಯೇ ತಹಶೀಲ್ದಾರ್ ಆರ್.ವಿ.ಕಟ್ಟಿ ಅವರು ಜಿಲ್ಲಾಧಿಕಾರಿಗಳ ಪತ್ರವನ್ನು ಉಲ್ಲೇಖಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಹಶೀಲ್ದಾರ್ ಕಚೇರಿ ಆವರಣ ಸೇರಿದಂತೆ 1 ಕಿ.ಮೀ. ಸುತ್ತಲೂ ರೈತರು ಯಾವುದೇ ಪ್ರತಿಭಟನೆ, ರಸ್ತಾರೋಖೊ ನಡೆಸಬಾರದೆಂದು 144 ಕಲಂ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದರು.
ನಿಷೇಧಾಜ್ಞೆ ಜಾರಿಯ ಬಗ್ಗೆ ಮಾಹಿತಿ ಅರಿಯದ ಕಬ್ಬು ಬೆಳೆಗಾರ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಸೇರುತ್ತಲೆ ಪೊಲೀಸರು ತಹಶೀಲ್ದಾರ್ ಆದೇಶವಿದ್ದು, ಯಾರು ಗುಂಪು ಕೂಡಬಾರದು ಹಾಗೂ ಜಿಲ್ಲಾಧಿಕಾರಿಗಳು ರೈತರಿಗೆ ಎಪಿಎಮ್‌ಸಿ ಆವರಣದಲ್ಲಿ ಪ್ರತಿಭಟನೆಗೆ ಸ್ಥಳ ನಿಗದಿ ಮಾಡಿರುವುದರಿಂದ ಅಲ್ಲಿಗೆ ತೆರಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ, ನಾವು ಕಾನೂನಿಗೆ ಗೌರವ ನೀಡುವ ಕಾರಣ ಎಪಿಎಮ್ ಸಿಯಲ್ಲೇ ಪ್ರತಿಭಟನೆ ಮುಂದುವರೆಸುತ್ತೇವೆ. ಮುಂದಿನ ದಿನಗಳಲ್ಲಿ ರೈತರು ಈ ಎಲ್ಲ ಬೆಳವಣಿಗೆಗಳಿಗೆ ಉತ್ತರ ಕೊಡಲಿದ್ದೇವೆ ಎಂದರು. ಸುದೀರ್ಘ ಒಂದು ತಿಂಗಳುಗಳ ಕಾಲ ಆಡಳಿತ ಸೌಧದ ಆವರಣದಲ್ಲಿ ಬಿಡಾರ ಹೂಡಿದ್ದ ರೈತ ಪ್ರತಿಭಟನಾಕಾರರು ಅನಿವಾರ್ಯವಾಗಿ ತಮ್ಮ ಹೋರಾಟವನ್ನು ಹಳಿಯಾಳ ಎಪಿಎಮ್‌ಸಿಗೆ ಸ್ಥಳಾಂತರಿಸಿದ ವಿದ್ಯಮಾನ ತಾಲೂಕಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಎಸ್.ಜಿವೋಜಿ, ಮಂಜುಳಾ ಗೌಡಾ, ಅಶೋಕ ಮೆಟಿ, ಪರಶುರಾಮ ಹಟ್ಟಿಕರ, ಬಳಿರಾಮ ಮೊರಿ, ಅಪ್ಪಾಜಿ ಶಹಪುರಕರ, ಚಂದ್ರಕಾಂತ ಮಾಚಕ, ಪರಶುಮಾರ ಡಗಿ ಮೊದಲಾದವರು ಇದ್ದರು.
ಹಳಿಯಾಳಕ್ಕೆ ಹೆಚ್ಚಿನ ಕಬ್ಬು ಕಟಾವು ಗ್ಯಾಂಗ್ ಕಳುಹಿಸಲು ಆಗ್ರಹ
