ಅಂಕೋಲಾ: ರಾಜ್ಯದ ಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ 5ನೇ ಬಾಪು ಸದ್ಭಾವನಾ ಪುರಸ್ಕಾರ 2022ನ್ನು ನೀಡಲಾಯಿತು.
2018ರಲ್ಲಿ ಶ್ರೀರಾಮ ಸ್ಟಡಿ ಸರ್ಕಲ್‌ನ ದಶಮಾನೋತ್ಸವದ ಸವಿ ನೆನಪಿಗಾಗಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಪ್ರಯುಕ್ತ ‘ಬಾಪು ಸದ್ಭಾವನಾ’ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಮಹಾದೇವ ಸ್ವಾಮೀಜಿ ಪ್ರಧಾನ ಅರ್ಚಕರು ಶ್ರೀ ಯಕ್ಷ ಚೌಡೇಶ್ವರಿ ದೇವಾಲಯ ನೀಲಕೋಡು ಹಾಗೂ ಆಶ್ರಯ ಪೌಂಡೇಶನ್ ಹಿರೇಗುತ್ತಿ ಅಧ್ಯಕ್ಷ ರಾಜೀವ ಗಾಂವಕರಯವರನ್ನು ಪುರಸ್ಕರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಕೃಷಿ ಅಧಿಕಾರಿ ಅರವಿಂದ ನಾಯಕ, ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಚಂದ್ರಮ ಅಧ್ಯಕ್ಷ ಜಗದೀಶ ನಾಯಕ ಆಗಮಿಸಿದ್ದರು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತ ರಾಜೀವ ಗಾಂವಕರವರು ಪ್ರತಿಯೊಬ್ಬರೂ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದರು. ಇನ್ನೋರ್ವ ಪುರಸ್ಕೃತರು ಶ್ರೀ ಕ್ಷೇತ್ರ ನೀಲಗೋಡಿನ ಗುರೂಜಿ ಮಹಾದೇವ ಸ್ವಾಮಿಯವರು ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ತಂದೆ-ತಾಯಿಯರ ಶ್ರಮವಿರುತ್ತದೆ. ಅದನ್ನು ಮನದಲ್ಲಿಟ್ಟುಕೊಂಡು ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೇ ಸನ್ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ ಎಂಬ ಭಾವನೆ ವ್ಯಕ್ತಪಡಿಸಿದರು.
ಮಂಜುನಾಥ ಗಾಂವಕರ ಬರ್ಗಿ ಮಾತನಾಡಿ, ಪ್ರಸ್ತುತ 2022ರ ಹೈಸ್ಕೂಲ್ ನೇಮಕಾತಿಯಲ್ಲಿ ಶ್ರೀರಾಮ ಸ್ಟಡಿ ಸರ್ಕಲ್ 46 ವಿದ್ಯಾರ್ಥಿಗಳು ನೇಮಕಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ವಿದ್ಯಾ ನಾಯ್ಕ ಭಟ್ಕಳ ನಿರೂಪಿಸಿದರೆ, ನಿರ್ದೇಶಕ ಸೂರಜ ನಾಯಕ ಸ್ವಾಗತಿಸಿದರು. ದಿವ್ಯ ಭಟ್ ಯಲ್ಲಾಪುರ ಸ್ವಾಗತ ಗೀತೆಯನ್ನು ಹಾಗೂ ಸಿಂಧೂ ಭಟ್ಕಳ ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಹಿರಿಯರಾದ ದೇವರಾಯ ಗೋಳಿಕಟ್ಟೆ, ವೆಂಟು ಮಾಸ್ತರ ಶೀಳ್ಯ, ಗಣಪತಿ ನಾಯಕ ಸೂರ್ವೆ, ಎನ್.ಬಿ. ನಾಯಕ ಮುಂತಾದ ಗಣ್ಯರು ಸಾಕ್ಷಿಯಾದರು.