ಕುಮಟಾ: ಪಾನಮತ್ತನಾದ ಶಿಕ್ಷಕನೋರ್ವ ಅಂಗಡಿ ಎದುರಲ್ಲಿ ರಂಪಾಟ ಮಾಡಿದ ಘಟನೆ ತಾಲೂಕಿನ ಕತಗಾಲ್‌ನಲ್ಲಿ ನಡೆದಿದ್ದು, ಈ ಶಿಕ್ಷಕನ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿಕ್ಷಕ ಎಂದರೆ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಗುರು. ನಮ್ಮ ಸಮಾಜದಲ್ಲಿ ಗುರುವಿಗೆ ತ್ರಿಮೂರ್ತಿಗಳಿಗಿಂತಲೂ ಮೇಲಿನ ಸ್ಥಾನ ನೀಡಲಾಗಿದೆ. ಆದರೆ ನೈತಿಕತೆಯನ್ನೆ ಮರೆತ ಶಿಕ್ಷಕನೋರ್ವ ಪಾನಮತ್ತನಾಗಿ ಸೃಷ್ಟಿಸಿದ ರಂಪಾಟ ನಗೆಪಾಟಿಲಿಗೆ ಕಾರಣವಾಗಿದೆ. ಕುಮಟಾದ ಹೆಗಡೆಕಟ್ಟೆ ಮೂಲದ ಪ್ರಾಥಮಿಕ ಶಾಲಾ ಶಿಕ್ಷಕಕ ಫುಲ್ ಟೈಟ್ ಆಗಿ ತೂರಾಡುತ್ತಿದ್ದ. ಬ್ಯಾಲೆನ್ಸ್ ತಪ್ಪಿ ಅಂಗಡಿಯೊಳಗೆ ಬಿದ್ದು ರಂಪಾಟ ಮಾಡಿ, ಅಂಗಡಿ ಮಾಲೀಕನಿಗೂ ಆತಂಕ ಹುಟ್ಟಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಈ ಶಿಕ್ಷಕನನ್ನು ತೀವ್ರ ತರಾಟೆಗೆ ತೆಗೆದುಕೊಂಡು, ನೈತಿಕತೆಯ ಪಾಠ ಹೇಳಿ ಕಳುಹಿಸಿದ್ದಾರೆ. ಅಲ್ಲದೇ ಆ ಭಾಗದ ಕೆಲ ಅಂಗಡಿಯಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೈಟ್ ಆದ ಶಿಕ್ಷಕನ ತೂರಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದು, ಜನರು ಈ ಶಿಕ್ಷಕನ ವರ್ತನೆ ನೋಡಿ ನಗುವಂತಾಗಿದೆ. ಇಂಥ ಶಿಕ್ಷಕನಿಂದ ವಿದ್ಯಾರ್ಥಿಗಳು ಎಂಥಾ ನೈತಿಕ ಪಾಠ ಕಲಿಯಲು ಸಾಧ್ಯ ಎಂದು ಜನರು ಆಡಿಕೊಳ್ಳುವಂತಾಗಿದ್ದು, ಈ ಶಿಕ್ಷಕನ ವರ್ತನೆಯ ಬಗ್ಗೆಯೂ ತೀವ್ರವಾಗಿ ಖಂಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಈ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.