ಶಿರಸಿ: ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಗೃತಿ ಸಮಿತಿ ವತಿಯಿಂದ ಎರಡು ದಿನಗಳ ಉತ್ತರ ಕನ್ನಡ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನವು ನವೆಂಬರ್ 19, 20 ರಂದು ನಗರದ ಶ್ರೀ ವೀರಭದ್ರ ದೇವಸ್ಥಾನದ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೋಕರ್ಣ, ಭಟ್ಕಳ, ಕುಮಟಾ, ಸಿದ್ದಾಪುರ, ಬನವಾಸಿ, ಮುಂಡಗೋಡು, ಶಿರಸಿ ಹಾಗೂ ಕಾರವಾರದಿಂದ ಅನೇಕ ಸಂಘಟನೆಗಳ ಮುಖ್ಯಸ್ಥರು, ದೇವಸ್ಥಾನದ ಧರ್ಮದರ್ಶಿಗಳು, ಮಹಿಳಾ ಮಂಡಳಿಯ ಮುಖ್ಯಸ್ಥರು, ಸಾಮಾಜಿಕ ಹೋರಾಟಗಾರರು ಅಧಿವೇಶನದಲ್ಲಿ ಉಪಸ್ಥಿತರಿದ್ದರು.
ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ ಬಗ್ಗೆ ಹಾಗೂ ಹಿಂದೂ ಧರ್ಮ ಮತ್ತು ರಾಷ್ಟ್ರದ ಮೇಲೆ ಬಂದಿರುವ ಅನೇಕ ಆಘಾತಗಳ ಕುರಿತು ಚಿಂತನ ಮಂಥನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರ ಧರ್ಮದ ಕಾರ್ಯ ಮಾಡುತ್ತಿರುವ ಅನೇಕರು ತಮ್ಮ ಆತ್ಮಕಥನವನ್ನು ಮಾಡಿಕೊಂಡರು. ಅಲ್ಲದೆ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲು ಪ್ರತಿಯೊಂದು ಸಂಘಟನೆಗಳು ಹಾಗೂ ಹಿಂದುಗಳು ತನು,ಮನ,ಧನದಿಂದ ಪ್ರಯತ್ನ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯದ ಸಮನ್ವಯಕ ಗುರುಪ್ರಸಾದ್ ಗೌಡ ಕರೆ ನೀಡಿದರು.
ಎರಡು ದಿನಗಳ ಹಿಂದೂ ರಾಷ್ಟ್ರ ಅಧಿವೇಶನವನ್ನು ನಗರದ ಬಣ್ಣದ ಮಠದ ಶ್ರೀ ಮ.ನಿ.ಪ್ರ. ಶ್ರೀ ಶಿವಲಿಂಗ ಮಹಾಸ್ವಾಮಿಗಳು,ಧ್ಯೇಯನಿಷ್ಠ ಪತ್ರಿಕೆಯ ಸಂಪಾದಕ ಸಚ್ಚಿದಾನಂದ ಹೆಗಡೆ, ವಿಷ್ಣುಮಠದ ಅಧ್ಯಕ್ಷ ವಿಷ್ಣುದಾಸ್ ಕಾಸರಕೋಡು ಉದ್ಘಾಟಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ನಾವೆಲ್ಲರೂ ನಮ್ಮ ಆಚರಣೆ, ಸಂಸ್ಕೃತಿ ಅರಿತು ಕೃತಿ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸೌ. ಆರತಿ ಮೊಗೆರ್ ಮಾತನಾಡಿ, ರಾಷ್ಟ್ರಧರ್ಮದ ಕಾರ್ಯದಲ್ಲಿ ಆಧ್ಯಾತ್ಮಿಕ ಬಲಕ್ಕೆ ತುಂಬಾ ಮಹತ್ವ ಇದೆ. ಹಾಗಾಗಿ ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಆಧ್ಯಾತ್ಮಿಕವಾಗಿಯೂ ಸದೃಢರಾಗಬೇಕಿದೆ ಎಂದರು. ನಂತರ ಇತಿಹಾಸಕಾರರು ಮತ್ತು ನ್ಯಾಷನಲ್ ಫೆಲೋಶಿಪ್ ಕಮಿಟಿ ದೆಹಲಿಯ ಸದಸ್ಯರೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ, ಹಿಂದೂ ಧರ್ಮದ ವ್ಯಾಪಕತೆ ಅರಿಯದೆ ಹಿಂದೂ ಧರ್ಮದ ಅವಹೇಳನ ಮಾಡುತ್ತಿರುವುದು ಖೇದನಿಯ ಎಂದರು.
ಅಧಿವೇಶನದಲ್ಲಿ ಬಜರಂಗದಳದ ವಿಠ್ಠಲ್ ಪೈ, ಆರೋಗ್ಯ ಭಾರತೀಯ ನಾಗೇಶ್ ತಾಪಾರ್, ಶಿರಸಿ ನಗರ ಸಭೆಯ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಅಖಿಲ ಭಾರತ ಹಿಂದೂ ಮಹಾಸಭಾದ ಡಾ. ಬಸವಲಿಂಗ ಡಿ ಹಡಪದ, ಶಿರಸಿಯ ಪವಿತ್ರ ಹೊಸೂರು, ಧಾರವಾಡ ಜಿಲ್ಲಾ ನ್ಯಾಯವಾದಿ ದತ್ತಾತ್ರೇಯ ನಾಯಕ್, ಶಿವಾಜಿ ಸಮಿತಿ ಕಾರವಾರ ಘಟಕದ ವಿನಾಯಕ್ ಸಾವಂತ್ ಮುಂತಾದವರು ತಮ್ಮ ವಿಷಯ ಮಂಡನೆ ಮಾಡಿದರು.
ಅಧಿವೇಶನದ ಸಮಾರೋಪಕ್ಕೆ ಉಪೇಂದ್ರ ಸೇವಾ ಸಮಿತಿ ಟ್ರಸ್ಟ್ ನ ಸಂಸ್ಥಾಪಕ ಉಪೇಂದ್ರ ಪೈ ಆಗಮಿಸಿ ಮಾತನಾಡುತ್ತಾ, ನಾವೆಲ್ಲರೂ ಹಿಂದುಗಳು ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ, ಪರಂಪರೆ, ಆಚರಣೆ ತಿಳಿಸುವ ಮೂಲಕ ಅವರನ್ನು ಧರ್ಮಚಾರಣಿಗಳನ್ನಾಗಿ ಮಾಡುವುದು ತುಂಬಾ ಮಹತ್ವದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಧರ್ಮದರ್ಶಿ ರಾಜಶೇಖರ್ ಒಡೆಯರ್ ಹಾಗೂ ಹಿಂದೂ ಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ಉಪಸ್ಥಿತರಿದ್ದರು.