ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸಕಲ ಬೇಣದಲ್ಲಿ ಭಾರೀ ಟ್ಯಾಂಕರ್ ಲಾರಿಯೊಂದು ಬೆಳಗಾಗುವ ಮೊದಲೇ ರಾತ್ರಿ ನಿಂತ ಜಾಗದಲ್ಲಿಯೇ ಬ್ಯಾಟರಿ ದೋಷ, ಶಾರ್ಟ್ ಸರ್ಕಿಟ್ ಇಲ್ಲವೇ ಇತರೆ ಕಾರಣಗಳಿಂದ ಬೆಂಕಿ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ನಾಗರಾಜ ಅರ್ಜುನ್ ನಾಯ್ಕ ಕುಟುಂಬದ ನಿಶಾ ನಾಗರಾಜ ನಾಯ್ಕ ಮಾಲಕತ್ವದ KA30 A 0933 ನಂಬರಿನ ಟ್ಯಾಂಕರ್ ಲಾರಿಗೆ ಅದಾವುದೋ ಕಾರಣದಿಂದ ಬೆಂಕಿ ತಗುಲಿದ್ದು, ನಸುಕಿನ ಜಾವ ಸಂಭವಿಸಿರಬಹುದಾದ ಈ ಬೆಂಕಿ ಅವಘಡ ದಾರಿಹೋಕರ ಮೂಲಕ ತಿಳಿದಿದೆ.
ಮನೆಯವರ ಗಮನಕ್ಕೆ ಬರುವಷ್ಟರಲ್ಲಿ,ಲಾರಿಯ ಬ್ಯಾಟರಿ,ಮುಂಬದಿ ಟೈಯರ್ ಗಳು,ಡ್ರೈವರ್ ಕ್ಯಾಬಿನ್ ಮತ್ತು ಇಂಜಿನ್ ಪೂರ್ತಿ ಸುಟ್ಟು ಕರಕಲಾಗಿದೆ. ಸಂಸಾರ ನಿರ್ವಹಣೆ ಉದ್ದೇಶದಿಂದ ಟ್ರಾನ್ಸ್ಪೋರ್ಟ್ ಉದ್ಯಮವನ್ನು ನಂಬಿ, ಕಳೆದ ಒಂದೆರಡು ವರ್ಷಗಳ ಹಿಂದಷ್ಟೇ ಸೆಕೆಂಡ್ ಹ್ಯಾಂಡ್ ಟ್ಯಾಂಕರ್ ಲಾರಿ ಖರೀದಿಸಿ ಡಾಂಬರ್ ಸಾಗಣೆ ಮತ್ತಿತರ ಉದ್ದೇಶಕ್ಕೆ ಬಳಸುತ್ತಿದ್ದು,,ವಾರದಿಂದೀಚೆಗೆ ಮುಂಬದಿಯ ಹೊಸ ಟೈರ್ ಗಳನ್ನು ಅಳವಡಿಸಿದ್ದರು.
ಇತ್ತೀಚೆಗೆ ಇನ್ನೊಂದು ಟ್ಯಾಂಕರ್ ಅನ್ನು ಖರೀದಿಸಿದ್ದರಾದರೂ, ಅದೃಷ್ಟವಶಾತ್ ಅದನ್ನು ದೂರದಲ್ಲಿ ಬೇರೊಂದು ಜಾಗದಲ್ಲಿ ನಿಲುಗಡೆಗೊಳಿಸಿದ್ದರಿಂದ, ಅದಕ್ಕೂ ಬೆಂಕಿ ಹರಡುವ ಸಂಭವನೀಯ ಸಾಧ್ಯತೆ ತಪ್ಪಿದಂತಾಗಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಸಾಲ ಮಾಡಿಕೊಂಡು ಟ್ರಾನ್ಸ್ ಪೋರ್ಟ ಉದ್ಯಮ ನಡೆಸಲು ಮುಂದಾದ ಕುಟುಂಬ,ಆಕಸ್ಮಿಕವಾಗಿ ವಾಹನಕ್ಕೆ ತಗುಲಿದ ಬೆಂಕಿ ಅವಘಡದಿಂದ ಆಘಾತವಾದಂತಿದ್ದು, ತಮಗಾದ ಲಕ್ಷಾಂತರ ರೂಪಾಯಿ ಹಾನಿಯ ಕುರಿತು ಚಿಂತೆ ಪಡುವಂತಾಗಿದೆ. ಈ ಅಗ್ನಿ ಅನಾಹುತಕ್ಕೆ ಕಾರಣ ಮತ್ತು ಹಾನಿ ಅಂದಾಜಿನ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.