ಕಾರವಾರ: ಸೀಬರ್ಡ್ ಕಾಂಟ್ರಾಕ್ಟ್ ಡ್ರೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ ನೂತನ ಕಚೇರಿಯನ್ನು ಮಾಜಿ ಶಾಸಕರೂ, ಯೂನಿಯನ್ ಅಧ್ಯಕ್ಷರೂ ಆಗಿರುವ ಸತೀಶ್ ಸೈಲ್ ಅಮದಳ್ಳಿಯಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಕೆಲ ಸಮಯದ ಹಿಂದೆ ಈ ಯೂನಿಯನ್ ಕಾರ್ಮಿಕ ಕಾಯಿದೆ ಅಡಿಯಲ್ಲಿ ನೋದಾಯಿಸಲ್ಪಟ್ಟತ್ತು.
ಸತೀಶ್ ಸೈಲ್ ಅಧ್ಯಕ್ಷತೆಯಲ್ಲಿ ನೋಂದಾವಣೆ ಆದ ಕಾರ್ಮಿಕ ಯೂನಿಯನ್ ಹಲವಾರು ಸೌಲಭ್ಯಗಳನ್ನು ಹೋರಾಟದ ಮೂಲಕ ಗುತ್ತಿಗೆ ಕಾರ್ಮಿಕರಿಗೆ ಒದಗಿಸಿಕೊಟ್ಟಿರುವ ಬಗ್ಗೆ ಕಾರ್ಮಿಕರು ಸತೀಶ ಸೈಲ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಬಾಕಿ ಇರುವ ಎಲ್ಲಾ ಕಾರ್ಮಿಕ ವಿವಾದಗಳನ್ನು ನೌಕಾನೆಲೆ ಅಧಿಕಾರಿಗಳ, ಕೇಂದ್ರ ಕಾರ್ಮಿಕ ಅಧಿಕಾರಿಗಳ ಹಾಗೂ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಯೂನಿಯನ್ ಮತ್ತು ಕಾಂಟ್ರಾಕ್ಟ್ದಾರ ಕಂಪನಿಗಳ ಸಭೆ ನಡೆಸಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಯೂನಿಯನ್ ಅಧ್ಯಕ್ಷ ಸತೀಶ್ ಸೈಲ್ ಭರವಸೆ ನೀಡಿದರು. ಒಂದುವೇಳೆ ಕಂಟ್ರಾಕ್ಟರ್ ಕಂಪನಿಗಳು ಇದಕ್ಕೆ ಒಪ್ಪದೆ ಹೋದರೆ ಎಲ್ಲಾ ಗುತ್ತಿಗೆ ಕಾರ್ಮಿಕರ ಹಾಗೂ ಸ್ಥಳೀಯರ ಸಹಕಾರದಿಂದ ಮುದಗಾದಿಂದ ಸಂಕ್ರು ಬಾಗ್‌ವರೆಗೆ ನೌಕಾ ನೆಲೆಯ ಎಲ್ಲಾ ದ್ವಾರಗಳ ಮುಂದೆ ಬೃಹತ್ ಪ್ರತಿಭಟನೆ ಮತ್ತು ಮುಷ್ಕರ ನಡೆಸುವ ಎಚ್ಚರಿಕೆಯನ್ನೂ ಸೈಲ್ ಇದೇ ವೇಳೆ ನೀಡಿದರು.
ಈ ವೇಳೆ ಯೂನಿಯನ್ ಕಾರ್ಮಿಕ ಕಾನೂನು ಸಲಹೆಗಾರ ಕೆ.ಶಂಭು ಶೆಟ್ಟಿ, ಗಿರೀಶ್ ಆಗೇರ, ಪ್ರಸನ್ನ ಹುಲಸ್ವರ್, ವಿಶಾಲ್ ಕಲ್ಗುಟ್ಕರ್, ಉಪಾಧ್ಯಕ್ಷ ಹಸನ್ ಶೇಖ್, ಪ್ರಧಾನ ಕಾರ್ಯದರ್ಶಿ ಗಜಾನನ ನಾಯ್ಕ್, ಖಜಾಂಜಿ ಅಮೃತ್ ರೆವಣಕರ್, ಸಹ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ರಮೇಶ್ ತಳೇಕರ್, ಮೈನುದ್ದಿನ್, ಅಬ್ಬಾಸ್ ಆಲಿ, ಹರೀಶ್, ಅಜಯ್, ಕಾಶೀನಾಥ್ ಮುಂತಾದವರು ಮತ್ತು ನೂರಾರು ಸದಸ್ಯರು ಹಾಜರಿದ್ದರು.