Slide
Slide
Slide
previous arrow
next arrow

ಕೂಲಿಕಾರರು ಕಡ್ಡಾಯವಾಗಿ ಇ- ಶ್ರಮ್ ಕಾರ್ಡ್ ಪಡೆಯಿರಿ: ಎನ್.ಕೆ.ತೆಂಡೂಲ್ಕರ್

300x250 AD

ಕಾರವಾರ: ಗ್ರಾಮೀಣ ಪ್ರದೇಶದಲ್ಲಿ ನರೇಗಾದಡಿ ಕೆಲಸ ನಿರ್ವಹಿಸುವ ಕೂಲಿಕಾರರು ಹಾಗೂ ಅಸಂಘಟಿತ ಕೂಲಿ ಕಾರ್ಮಿಕರು ಕಡ್ಡಯವಾಗಿ ಇ-ಶ್ರಮ್ ಕಾರ್ಡ್ ಮತ್ತು ಕೇವಲ 12 ರೂ. ಹಾಗೂ 330 ರೂ. ಪಾವತಿಸುವ ಮೂಲಕ ತಲಾ 2 ಲಕ್ಷ ರೂ. ಮೊತ್ತದ ಅಪಘಾತ ಮತ್ತು ಜೀವನ್ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತೋಡೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಎನ್.ಕೆ.ತೆಂಡೂಲ್ಕರ್ ಹೇಳಿದರು.
ತಾಲೂಕಿನ ತೋಡೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಂಘದ ಸದಸ್ಯರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಿಸಿ ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ, ಬಾಲ್ಯ ವಿವಾಹ ನಿಷೇಧ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಧ್ಯತೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಚಂದ್ರಕಾಂತ ಚಿಂಚಣಕರ ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆಗೈಯ್ಯುತ್ತಿದ್ದು, ಮನೆ ಹಾಗೂ ಪರಿಸರ ಸ್ವಚ್ಚತೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಗ್ರಾಮದ ಪ್ರತಿಯೊಬ್ಬ ಮಹಿಳೆಯರು ಕಸವನ್ನು ಬಯಲು ಪ್ರದೇಶ ಹಾಗೂ ಅಕ್ಕ-ಪಕ್ಕದವರ ಆಸ್ತಿಯಲ್ಲಿ ಎಸೆಯಬಾರದು. ಹಾಗೇನಾದರೂ ಬೇಕಾ ಬಿಟ್ಟಿಯಾಗಿ ಕಸ ಚೆಲ್ಲಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುತ್ತವೆ. ಆದ್ದರಿಂದ ಗ್ರಾಮಸ್ಥರು ಜಾಗೃತರಾಗಿ ತಮ್ಮ ಮನೆಯ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿ ಗ್ರಾಮ ಪಂಚಾಯತಿಯಿ0ದ ನೀಡುವ ಕಸದ ಡಬ್ಬಿಯಲ್ಲಿ ಸಂಗ್ರಹಿಸಿಡಬೇಕು. ನಂತರ ಗ್ರಾಮದಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನಕ್ಕೆ ನೀಡಬೇಕು. ಈ ಸಂಗ್ರಹ ಕಸದಿಂದ ಗೊಬ್ಬರ ತಯಾರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಡಿ ನಿರ್ಮಿಸಿಕೊಳ್ಳಬಹುದಾದ ಅಂಗನವಾಡಿ ಕೇಂದ್ರ, ಶಾಲಾ ಶೌಚಾಲಯ, ಕಂಪೌಂಡ್, ಆಟದ ಮೈದಾನ, ವೈಯಕ್ತಿಕ ಪೌಷ್ಟಿಕ ಕೈತೋಟ, ನರ್ಸರಿ, ಎನ್‌ಆರ್‌ಎಲ್‌ಎಂ ಶೆಡ್‌ನ ಕುರಿತು ಅಗತ್ಯ ಮಾಹಿತಿ ನೀಡಿದರು. ಜೊತೆಗೆ ಕೂಡಲೇ ಗ್ರಾಮ ಪಂಚಾಯತಿಗೆ ಕಾಮಗಾರಿ ಹಾಗೂ ಕೆಲಸದ ಬೇಡಿಕೆ ಸಲ್ಲಿಸುಂತೆ ತಿಳಿಸಿದರು.
ಇದೇ ವೇಳೆ ಸ್ವ-ಸಹಾಯ ಸಂಘಗಳ ಎಂಬಿಕೆ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಸರಕಾರದ ವಿವಿಧ ಯೋಜನೆಗಳಡಿ ಸಿಗುವಂತಹ ಸೌಕರ್ಯಗಳನ್ನು ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಪೇರು ಗೌಡ, ಉಪಾಧ್ಯಕ್ಷೆ ಸೀಮಾ ಗುನಗಾ, ಸದಸ್ಯರಾದ ಸಂತೋಷ ನಾಯ್ಕ, ಕರುಣಾ ನಾಯ್ಕ, ಸುಶೀಲಾ ಅಗೇರ, ಪಂಚಾಯತ್‌ನ ಕಾರ್ಯದರ್ಶಿಗಳಾದ ಕಿರಣ್ ಹೆಗಡೆ, ಡಿಇಒಗಳಾದ ಅನಿಲ ನಾಯ್ಕ, ಪ್ರವೀತಾ ದೇವಾಸ್ಕರ್, ಮೇಟ್ ಶ್ರೆಯಾ ಬಾಂದೇಕರ್, ಎಂಬಿಕೆ ದೇವಿಕಾ ನಾಯ್ಕ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top