ಕಾರವಾರ: ಖಾರಲ್ಯಾಂಡ್ ಕಾಮಗಾರಿಯಿಂದ ಉತ್ತರ ಕನ್ನಡದ ಕರಾವಳಿಯಲ್ಲಿ 25ಸಾವಿರ ಎಕರೆ ಕೃಷಿ ಭೂಮಿಯನ್ನು ಉಳಿಸುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಉಪ್ಪು ನೀರು ನುಗ್ಗಿ ಸಮಸ್ಯೆಗೊಳಗಾದ ಜಮೀನಿನ ಪುನಶ್ಚೇತನಗೊಳಿಸುವ ಕಾರ್ಯಕ್ರಮ ಇದಾಗಿದೆ. ಇದರೊಟ್ಟಿಗೆ ನೀರು ಕೂಡುವ ಕೆಲಸವೂ ಆಗಲಿದೆ. 100, 200 ಎಕರೆಗಳಷ್ಟು ಅಚ್ಚುಕಟ್ಟು ಕೂಡ ಅಭಿವೃದ್ಧಿಯಾಗಲಿದೆ. ಈ ಕಾಮಗಾರಿಯಿಂದ ಜನತೆಗೆ ಓಡಾಡಕ್ಕೆ ದಾರಿ ಕೂಡ ಲಭ್ಯವಾಗಲಿದೆ. ಸುತ್ತು ಬಳಸಿ ಬರಬೇಕಿದ್ದಲ್ಲಿ ನೇರವಾಗಿ ದಾರಿ ಲಭ್ಯವಾಗಲಿದೆ. ನೀರು ಜಾಸ್ತಿ ಇದ್ದಲ್ಲಿ ಸೇತುವೆ, ಬ್ಯಾರೇಜ್ ಕೂಡ ನಿರ್ಮಾಣ ಮಾಡುತ್ತೇವೆ. ಜನತೆಗೆ ಸಂಚಾರಕ್ಕೂ ಅನುಕೂಲ ಕಲ್ಪಿಸುತ್ತೇವೆ ಎಂದು ಹೇಳಿದರು.
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಬೃಹತ್ ನೀರಾವಳಿ ಯೋಜನೆ ರೂಪಿಸಲು ಅವಕಾಶ ಇಲ್ಲ. ಇಲ್ಲಿ ಸಣ್ಣ ನೀರಾವರಿ ಇಲಾಖೆಯಿಂದಲೇ ರೈತರಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ನಡೆಯಬೇಕು. ಆ ದಿಸೆಯಲ್ಲಿ ಪ್ರಯತ್ನ ಆರಂಭವಾಗಿದೆ. ಇಲ್ಲಿ ನೀರಾವರಿ ಕೆರೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕೆರೆಗಳಿದ್ದರೆ ಇನ್ನಷ್ಟು ಅನುಕೂಲವಾಗುತ್ತಿತ್ತು ಎಂದರು.
ಇಡೀ ರಾಜ್ಯ ಸರ್ವಾಂಗೀಣ ಅಭಿವೃದ್ಧಿ ಆಗದೆ ಇದ್ದಲ್ಲಿ ನಾವು ಅಭಿವೃದ್ಧಿಯಾಗಿದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರತಿ ಮನುಷ್ಯ ಇನ್ನೊಬ್ಬರ ಹಂಗಿನಲ್ಲಿ ಇರದೆ ಸ್ವಾವಲಂಬಿಯಾಗಿ ಬದುಕಬಲ್ಲೆ. ಸ್ವಾಭಿಮಾನಿಯಾಗಿ ಬಾಳಬಲ್ಲೆ ಎಂದಾದಾಗ ಸ್ವತಂತ್ರರು ಎಂದು ಹೇಳಿಕೊಳ್ಳಲು ಸಾಧ್ಯ. ಆಳುತ್ತಿರುವವರು ಆಳುತ್ತಲೇ ಇದ್ದಾರೆ. ಉಳುಮೆ ಮಾಡುವವರು ಉಳುಮೆ ಮಾಡುತ್ತಲೇ ಇದ್ದಾರೆ. ಈ ಸ್ಥಿತಿ ಮುಂದುವರಿಯಬಾರದು. ಪ್ರತಿಯೊಬ್ಬರೂ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಾವೆಲ್ಲ ಒಂದೇ ಎನ್ನುವ ಭಾವನೆ ಇರಬೇಕು. ಅಭಿವೃದ್ಧಿ ಎಲ್ಲೆಡೆ ಆಗಬೇಕು. ಕಟ್ಟ ಕಡೆಯ, ದಟ್ಟ ದರಿದ್ರರೂ ಮೇಲೆ ಬರಬೇಕು. ಅಂತಹ ಕೆಲಸ ಆಗಬೇಕು. ಕಷ್ಟ ಇರುವಲ್ಲಿ ಕೆಲಸ ಮಾಡಬೇಕು. ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದು ಅವರು ತಿಳಿಸಿದರು.
ಕೋಟ್…
ಕೆಲಸ ಮಾಡುವವರನ್ನು ಜನರು ಗುರುತಿಸುತ್ತಾರೆ. ಹಣ ಮಾಡುವುದು, ಖರ್ಚು ಮಾಡುವುದೇ ರಾಜಕಾರಣ ಆಗಬಾರದು. ರೂಪಾಲಿ ನಾಯ್ಕ ಕೆಲಸಗಾರರು. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ.
• ಮಾಧುಸ್ವಾಮಿ, ಸಣ್ಣ ನೀರಾವರಿ ಸಚಿವ