ಅಂಕೋಲಾ: ರಾಜ್ಯ ಸರಕಾರದ ಯೋಜನೆ ಖಾರಲ್ಯಾಂಡ್ ಕೆನಲ್ ನಾಲೆಗಳ ಅಭಿವೃದ್ಧಿ, ಪಟ್ಟಣದ ನೀರು ಶುದ್ಧೀಕರಣ ಕಾರ್ಯಗಳು ದೇಶದಲ್ಲಿಯೇ ಮಾದರಿಯಾಗಿದೆ ಎಂದು ಕೇಂದ್ರ ಸರಕಾರ ಅಭಿನಂದಿಸಿದೆ ಎಂದು ಚಿಕ್ಕ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಅವರು ತಾಲೂಕಿನ ಸಗಡಗೇರಿ ಪಂಚಾಯತ ವ್ಯಾಪ್ತಿಯ ಉಳವರೆಯಲ್ಲಿ ಖಾರಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದಲ್ಲಿ ಹರಿಯುವ ನದಿಗಳಿಗೆ ಖಾರಲ್ಯಾಂಡ್ ನಿರ್ಮಾಣ ಮಾಡಲು 1,500 ಕೋಟಿ ಮೊತ್ತದ ಮಾಸ್ಟರ್ ಪ್ಲಾನಿಗೆ ಸರ್ಕಾರ ಸಮ್ಮತಿಯನ್ನು ನೀಡಿದೆ. ಮೊದಲ ಹಂತದಲ್ಲಿ 300 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ವ್ಯವಸಾಯ ಯೋಗ್ಯ ಜಮೀನನ್ನು ಪುನ ಸ್ಥಾಪನೆ ಮಾಡಲು 20455 ಎಕರೆ ಯೋಗ್ಯ ಕೃಷಿ ಭೂಮಿಯನ್ನು ಸ್ಥಾಪನೆ ಮಾಡಲು 66714 ಮೀಟರ್ ಉದ್ದದ ಖಾರಲ್ಯಾಂಡ್ ನಿರ್ಮಾಣಗೊಳ್ಳಲಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ಪೂರ್ತಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು.
ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಲ್ವೇಕರ್, ತಹಶೀಲ್ದಾರ ಉದಯ ಕುಂಬಾರ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪಿ.ವೈ.ಸಾವಂತ, ಗ್ರಾಪಂ ಅಧ್ಯಕ್ಷೆ ಸೀತಾ ಗೌಡ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಸ್ವಾತಂತ್ರ‍್ಯ ಹೋರಾಟಗಾರರ ಮನೆತನದ ಹುಲಿಯಪ್ಪ ಗೌಡ, ಮುಂತಾದವರು ಇದ್ದರು. ರಮೇಶ ನಾಯಕ ಸ್ವಾಗತಿಸಿದರು. ಪತ್ರಕರ್ತ ಸುಭಾಷ್ ಕಾರೇಬೈಲ್ ನಿರ್ವಹಿಸಿದರು. ಚಿಕ್ಕ ನೀರಾವರಿ ಎಂಜಿನಿಯರ್ ರೂಪಾ ಗಾಂವಕರ್ ವಂದಿಸಿದರು.
ರಾಜ್ಯ ಸರ್ಕಾರದ ಖಾರಲ್ಯಾಂಡ್ ಯೋಜನೆಗೆ ಕೇಂದ್ರ ಅಭಿನಂದಿಸಿದೆ : ಮಾಧುಸ್ವಾಮಿ
![](https://euttarakannada.in/wp-content/uploads/2022/11/17kar8-730x438.jpg?v=1668749275)