ಕಾರವಾರ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ.ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜಕೀಯವನ್ನು ಕೂಡಾ ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದು ಸಮಾಜ ಸುಧಾರಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸಲಿದೆ. ಯಾವುದೇ ರಾಜಕೀಯ ಪಕ್ಷ ಹಾಗೂ ಆಡಳಿತದ ಕುರಿತು ನಿಮ್ಮನ್ನು ನೀವು ಅರಿತುಕೊಳ್ಳವು ಒಳ್ಳೆಯದು. ಯಾವುದೇ ಉನ್ನತ ಹುದ್ದೆಗೇರಲು ಅದಕ್ಕೆ ತಕ್ಕ ಪರಿಶ್ರಮ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಉತ್ತಮ ಪ್ರಜೆಗಳಾಗಲು ಉತ್ತಮ ಶಿಕ್ಷಣ ತುಂಬಾ ಅವಶ್ಯಕ. ಹಾಗೆಯೇ ರಾಜಕೀಯ ಮತ್ತು ರಾಜಕಾರಣಿಗಳನ್ನು ಟೀಕಿಸುವ ಮೊದಲು ನಿಮ್ಮ ಕರ್ತವ್ಯವೇನು ಎಂದು ಅರಿಯುವುದು ಉತ್ತಮ. ಇಂದಿನ ಮಕ್ಕಳು ಉತ್ತಮ ಸಮಾಜ ನಿರ್ಮಿಸಲು ಮೊದಲು ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳವುದು. ರಾಜಕೀಯ, ಪ್ರಜಾಪ್ರಭುತ್ವ ಮತ್ತು ಆಡಳಿತದ ಬಗ್ಗೆ ಹೆಚ್ಚು ತಿಳಿಕೊಂಡು ಸಮಾಜದಲ್ಲಿ ತಮ್ಮ ಕರ್ತವ್ಯ ಮತ್ತು ಜವಬ್ದಾರಿಗಳನ್ನು ಅರಿಯುವುದು. ಯಾವುದೇ ವ್ಯವಸ್ಥೆ ಬಗ್ಗೆ ತಪ್ಪಿದಲ್ಲಿ ಅದರ ಬಗ್ಗೆ ದೂರು ನೀಡುವುದು ಅಥವಾ ಆ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳವುದು. ರಾಜಕೀಯ ಕಲಾಪಗಳನ್ನು ನೋಡುವುದು ಅದರ ಬಗ್ಗೆ ಜ್ಞಾನ ಪಡೆದುಕೊಳ್ಳುವುದು ಈಗಿನಿಂದಲೇ ನೀವು ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಟ್ಟದ ಅಣುಕು ಯುವ್ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ 12 ವಿದ್ಯಾರ್ಥಿಗಳಂತೆ ಒಟ್ಟು 57 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಹೊನ್ನಾವರ ತಾಲೂಕಿನ ಸರಕಾರಿ ಪ್ರೌಢ ಶಾಲೆ ನಮೀತಾ ನಾಯ್ಕ್, ದ್ವಿತೀಯ ಕುಮಟಾ ತಾಲೂಕಿನ ಆದಿತ್ಯ ಪಟಗಾರ, ತೃತೀಯ ಭಟ್ಕಳ ತಾಲೂಕಿನ ನಮೀತಾ ಹೆಬ್ಬಾರ ವಿಜೇತರಾಗಿದ್ದು,ಈ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರ್ ನಾಯಕ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಲತಾ ಎಂ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್ ನಾಯಕ, ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ ಮಂಜುನಾಥ ಸಿ.ಬರ್ಗಿ, ಸಮಾಜ ವಿಜ್ಞಾನ ವೇದಿಕೆಯ ಅಧ್ಯಕ್ಷ ಮಾರುತಿ ನಾಯಕ ಹಾಗೂ ತಾಲೂಕಿನ ಶಿಕ್ಷಕರುಗಳು ಉಪಸ್ಥಿತರಿದ್ದರು.