ಸಿದ್ದಾಪುರ: ಅತಿಕ್ರಮಣ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದ ಫಾರೆಸ್ಟರ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಾನಸೂರಿನ ಬಿಳೆಗೋಡು ಗ್ರಾಮದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಬಿಳೆಗೋಡ ಗ್ರಾಮಕ್ಕೆ ಅತಿಕ್ರಮಣ ವಿಚಾರದ ತನಿಖೆಯಲ್ಲಿ ತೊಡಗಿದ್ದ ವಿ.ಟಿ. ತಿಮ್ಮಾ ನಾಯ್ಕ ಎಂಬ ವನಪಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಲ್ಲಿ ವನಪಾಲಕನ ಕೈ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಇತ್ತ ವನಪಾಲಕನ ಮೇಲೆ ಹಲ್ಲೆ ಮಾಡಿದ ಬಿಳೆಗೋಡ ಗ್ರಾಮದ ಮಹಾಬಲೇಶ್ವರ ಚಂದು ಮರಾಠಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು ಮಹಾಬಲೇಶ್ವರ ಈ ಹಿಂದೆ ಸೆರೆವಾಸವನ್ನು ಅನುಭವಿಸಿ ಬಂದಿದ್ದ ಎಂದು ತಿಳಿದುಬಂದಿದೆ.
ಅತಿಕ್ರಮಣ ವಿಚಾರಕ್ಕೆ ಫಾರೆಸ್ಟರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿ ತೆರಳಿದ್ದರು. ಅದೇ ಸಂದರ್ಭದಲ್ಲಿ ಮಹಾಬಲೇಶ್ವರ ಚಂದು ಮರಾಠಿ ಗಲಾಟೆ ಮಾಡಿದ್ದು, ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಏಕಾಏಕಿ ಸಿಟ್ಟಿಗೆದ್ದ ಮಹಾಬಲೇಶ್ವರ ಕತ್ತಿಯಿಂದ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದನ್ನು ಕಂಡ ವನಪಾಲಕ ವಿ.ಟಿ. ತಿಮ್ಮಾ ನಾಯ್ಕ ತಡೆಯಲು ಹೋಗಿದ್ದು ಆಗ ಅವರ ಮೇಲೆ ಕತ್ತಿಯಿಂದ ಮಹಾಬಲೇಶ್ವರ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಹಲ್ಲೆಯ ಪರಿಣಾಮ ಬಲಗೈನ ಎರಡು ಬೆರಳುಗಳು ತುಂಡಾಗಿದ್ದು ಮೂಳೆ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣವೇ ಶಿರಸಿ ಟಿಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಟಿಎಸ್ಎಸ್ ಆಸ್ಪತ್ರೆ ವೈದ್ಯರು ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲು ತಿಳಿಸಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.