ಭಟ್ಕಳ: ಕಾಲೇಜನ್ನು ಸಂಪರ್ಕಿಸುವ ರಸ್ತೆಯಲ್ಲಿ ಹೊಂಡಗಳು ಬಿದ್ದು ಕೆಲವು ತಿಂಗಳುಗಳೇ ಕಳೆದರೂ ದುರಸ್ತಿ ಕಾರ್ಯ ನಡೆಯದೇ ಇರುವುದರಿಂದ ಬೇಸತ್ತ ಇಲ್ಲಿನ ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ತಾವೇ ರಸ್ತೆಗೆ ಸಿಮೆಂಟ್ ಕಾಂಕ್ರೀಟೀಕರಣ ಮಾಡಿದ್ದಾರೆ.
ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿನ ಅಂಜುಮನ್ ಕಾಲೇಜು ರಸ್ತೆಯಲ್ಲಿ ಹೊಂಡಗುಂಡಿಗಳೇ ನಿರ್ಮಾಣವಾಗಿದ್ದವು. ಕಾಲೇಜು ರೋಡ್ ಮಾರ್ಗ ಮಧ್ಯೆ ಇಲ್ಲಿನ ಲಕ್ಷ್ಮೀ ಸರಸ್ವತಿ ಸಹಕಾರಿ ಸಂಘದ ಕಚೇರಿಯ ಮುಂದೆ ಇಳಿಜಾರಿನುದ್ದಕ್ಕೂ ರಸ್ತೆ ಹೊಂಡಗಳು ವಾಹನ ಸವಾರರಿಗೆ ಆತಂಕವನ್ನು ತಂದೊಡ್ಡಿದ್ದವು. ಇದೀಗ ವಿದ್ಯಾರ್ಥಿಗಳೇ 2 ಗಂಟೆಯಿಂದ 5 ಗಂಟೆಯವರೆಗೂ ಕಾಂಕ್ರೀಟಿಕರಣ ನಡೆಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದಾರೆ. ರಸ್ತೆ ದುರಸ್ತಿಗೆ ಬೇಕಾದ ಸಿಮೆಂಟ್, ಜಲ್ಲಿಯನ್ನು ಕಾಲೇಜಿನಿಂದಲೇ ಪಡೆಯಲಾಗಿದೆ.
ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಮುಖ್ಯಸ್ಥ ಚಿದಾನಂದ ನಾಯ್ಕ ಮಾರ್ಗದರ್ಶನದಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿದಾನಂದ, ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರದ ಜೊತೆಗೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಿಗೆ ಪೂರಕವಾಗುವಂತೆ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.