ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ನಡೆಸುವ ಶ್ರೀ ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ಆಶ್ರಯದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಸಂಸ್ಕೃತೋತ್ಸವ ಹಾಗೂ ಎನ್‌ಎಸ್‌ಎಸ್ ದಿನಾಚರಣೆಯನ್ನು ನವೆಂಬರ್ 18 ಹಾಗೂ 19 ರಂದು ತಾಲೂಕಿನ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಆಯೋಜಿಸಲಾಗಿದೆ.
ನ.18 ರಂದು ಬೆಳಿಗ್ಗೆ 10.30ಕ್ಕೆ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದು, ಬಳಿಕ ರಾಜ್ಯಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ, ಪ್ರಬಂಧ, ಗೀತಾ ಕಂಠಪಾಠ, ಸ್ತೋತ್ರಗಾಯನ ಸ್ಪರ್ಧೆ, ಕಾವ್ಯ ವ್ಯಾಖ್ಯಾನ, ಪುರಾಣ ಪ್ರವಚನ ಸ್ಪರ್ಧೆಗಳು ನಡೆಯಲಿದೆ. ರಾಜ್ಯದ ವಿವಿಧಡೆಯಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ನ.19 ರಂದು ಮಧ್ಯಾಹ್ನ 3.30ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಅತಿಥಿಗಳಾಗಿ ಬೆಂಗಳೂರು ಸಂಸ್ಕೃತಿ ಭಾರತಿ ಪ್ರಮುಖ ಸತ್ಯನಾರಾಯಣ ಭಟ್ಟ, ಬೆಂಗಳೂರು ಸಂಸ್ಕೃತಿ ವಿವಿಯ ಡಾ. ಜೆ.ರೇವಣ್ಣ, ಹಿರಿಯ ವಿದ್ವಾಂಸ ಡಾ. ಸೂರ‍್ಯನಾರಾಯಣ ಭಟ್ ಹಿತ್ಲಳ್ಳಿ ಪಾಲ್ಗೊಳ್ಳಲಿದ್ದಾರೆ.
ಮತ್ತೂರಿನ ಅಗ್ನಿಹೋತ್ರಿ ಡಾ. ಎಂ.ಎಸ್.ಸನತ್‌ಕುಮಾರ ಸೋಮಯಾಜಿ ಅವರಿಗೆ ಸಮ್ಮಾನ ಹಾಗೂ ಬೆಂಗಳೂರು ಸಂಸ್ಕೃತ ವಿವಿಯ ಡಾ. ಕುಮುದಾ ರಾವ್ ಎಚ್.ಎ ಅವರಿಗೆ ಶ್ರೀಗಳಿಂದ ಪುರಸ್ಕಾರ ನಡೆಯಲಿದೆ. ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ಟ ಕೆರೇಕೈ ಅವರ ‘ಕಾವ್ಯ
ಕಲ್ಪವಲ್ಲಿ’ ಗ್ರಂಥ ಕೂಡ ಇದೇ ವೇಳೆ ಲೋಕಾರ್ಪಣೆ ಆಗಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ನರಸಿಂಹ ಭಟ್ಟ ತಾರೀಮಕ್ಕಿ ಪ್ರಕಟಣಯಲ್ಲಿ ತಿಳಿಸಿದ್ದಾರೆ.