ಯಲ್ಲಾಪುರ: ರೈತರಿಗೆ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊನೆಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಎಲೆಚುಕ್ಕಿ ರೋಗದ ನಿರ್ವಹಣೆ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಕೃಷಿ ಇಲಾಖೆ,ತೋಟಗಾರಿಕಾ ಇಲಾಖೆ ಮತ್ತು ಸ್ಕೋಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿ ಉಮ್ಮಚಗಿರವರ ಸಂಯುಕ್ತಾಶ್ರಯದಲ್ಲಿ ಆತ್ಮ ಯೋಜನೆ 2022-23ರ ಅಡಿಯಲ್ಲಿ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಿರಣಿಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ತೋಟಗಾರಿಕ ನಿರ್ದೇಶಕ ಸತೀಶ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತುತ ಅಡಿಕೆ ಬೆಳೆಗಾರರನ್ನು ಆತಂಕಕ್ಕೀಡುಮಾಡಿರುವ ಎಲೆಚುಕ್ಕಿ ರೋಗದ ಗುಣ ಲಕ್ಷಣ,ಮುಂಜಾಗೃತಾ ಕ್ರಮ ಹಾಗೂ ರೋಗದ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಇಲಾಖೆಯ ವತಿಯಿಂದ ಉಚಿತ ಶಿಲೀಂಧ್ರನಾಶಕ ಹಾಗೂ ಸೂಕ್ಷ್ಮ ಪೋಷಕಾಂಶಗಳು ಲಭ್ಯವಿರುವುದಾಗಿ ತಿಳಿಸಿದರು.ಕೃಷಿ ಸಹಾಯಕ ನಿರ್ದೇಶಕರಾದ ನಾಗರಾಜ ನಾಯ್ಕ್ ಹಾಗೂ ಆತ್ಮ ಕಮಿಟಿಯ ಅಧ್ಯಕ್ಷ ಗಣೇಶ ಹೆಗಡೆ ಅವರು ರೈತ ಉತ್ಪಾದಕ ಕಂಪನಿಯ ರೈತಪರ ನಡೆಗೆ ಸದಾ ಬೆಂಬಲವಾಗಿರುತ್ತೇವೆಂದು ತಿಳಿಸಿದರು.
ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಗುರುಪ್ರಸಾದ ಭಟ್ ಹೊನ್ನಳ್ಳಿ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊನೆಕೊಯ್ಲು ಪ್ರಾತ್ಯಕ್ಷಿಕೆಯನ್ನು ಪ್ರಾಯೋಗಿಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ ಭಟ್, ಮಹೇಶ ಹೆಗಡೆ ಗಿರಣಿಮನೆ, ಕಮಲಾಕರ ನಾಯ್ಕ್, ಜಮಟಗಾರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರೊಂದಿಗೆ ಚಾಲನೆ ಮಾಡಲಾಯಿತು.ಪ್ರಸ್ತುತ ಅಡಿಕೆ ಬೆಳೆಗಾರರಿ ಗೆ ಇರುವ ಕಾರ್ಮಿಕ ಸಮಸ್ಯೆಗೆ ಕೈಲಾದ ಪರಿಹಾರವನ್ನು ಕೊಡುತ್ತಿದ್ದೇವೆ ಹಾಗೂ ಮನೆ ಬಾಗಿಲಿಗೆ ಸೇವೆ ಒದಗಿಸುತ್ತೇವೆ ಮುಂದೆಯೂ ನಿಮ್ಮೊಂದಿಗೆ ಇರುತ್ತೇವೆಂದು ತಿಳಿಸಿದರು.
ಆಗಮಿಸಿದ್ದ ರೈತರು ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆ ಮತ್ತು ಇಲಾಖೆಯ ಅಧಿಕಾರಿಗಳ ನಡುವೆ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ನಿಗದಿತ ಗುರಿ ತಲುಪಲು ಬೇಕಾದ ಪರಸ್ಪರ ಸಹಕಾರದ ಬಗ್ಗೆ ಚರ್ಚಿಸಲಾಯಿತು. ಕೃಷಿ ಇಲಾಖೆಯ ಎಮ್.ಜಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕೃಷಿ, ತೋಟಗಾರಿಕಾ ಇಲಾಖೆಯ ಹಾಗೂ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಯ ಸಿಬ್ಬಂದಿಗಳು ಸಹಕರಿಸಿದರು.