ಕುಮಟಾ: ನಮ್ಮ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ 175 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕುಮಟಾ ತಾಲೂಕಿನ ಕಿಮಾನಿಯಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಖಾರ್‌ಲ್ಯಾಂಡ್ ಕಾಮಗಾರಿಗೆಯ ಶಂಕುಸ್ಥಾಪನೆಯನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ನ.17ರಂದು ನೆರವೇರಿಸಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1967- 68ರಲ್ಲಿ ದಿ.ರಾಮಕೃಷ್ಣ ಹೆಗಡೆ ಆರ್ಥಿಕ ಸಚಿವರಾಗಿದ್ದ ಸಂದರ್ಭದಲ್ಲಿ ಕರಾವಳಿ ಭಾಗದ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದನ್ನು ತಡೆಗಟ್ಟಲು ಖಾರ್‌ಲ್ಯಾಂಡ್ ಯೋಜನೆ ಜಾರಿಗೊಳಿಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದರು. ಆ ನಂತರ ಅಧಿಕಾರ ಅನುಭವಿಸಿದ ಸರ್ಕಾರಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಕರಾವಳಿ ಭಾಗದಲ್ಲಿ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ 1 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಜಿಲ್ಲೆಯ ಕರಾವಳಿ ಭಾಗದ 3 ಕ್ಷೇತ್ರಗಳಿಗೆ ತಲಾ 100 ಕೋಟಿ ಅನುದಾನ ನೀಡಿದ್ದಾರೆ. ಹೆಚ್ಚುವರಿಯಾಗಿ 75 ಕೋಟಿ ರೂ. ಅನುದಾನ ಮಂಜೂರಿ ಮಾಡಿದ್ದಾರೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ತಾಲೂಕಿನ ಕಿಮಾನಿಯಲ್ಲಿ ನ.17 ರಂದು 12.30 ಘಂಟೆಗೆ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಖಾರ್‌ಲ್ಯಾಂಡ್ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೆಚ್ಚುವರಿಯಾಗಿ 75 ಕೋಟಿ ರೂ. ಅನುದಾನ ಒದಗಿಸಲು ಕಾಮಗಾರಿಯ ಪಟ್ಟಿಯನ್ನು ಕಳುಹಿಸಿದಾಗ, ಅವಶ್ಯವಿರುವ ಕಡೆಗಳಲ್ಲಿ ಖಾರ್‌ಲ್ಯಾಂಡ್ ನಿರ್ಮಾಣದ ಪಟ್ಟಿಯನ್ನು ನೀವೇ ಸಿದ್ಧಪಡಿಸಿ, ಅದಕ್ಕೆ ಮಂಜೂರಾತಿ ನೀಡುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಭಟ್ಕಳ ಶಾಸಕ ಸುನೀಲ ನಾಯ್ಕ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ವಿವಿಧ ಸ್ಥರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿ, ಕ್ಷೇತ್ರದ ರೈತರ ಮತ್ತು ಮೀನುಗಾರರ ಹಿತ ಕಾಪಾಡಲು ಶಾಸಕ ದಿನಕರ ಶೆಟ್ಟಿ ಅವರ ಸತತ ಪರಿಶ್ರಮದ ಫಲವಾಗಿ ಮೊದಲ ಹಂತದಲ್ಲಿ 19 ಕೋಟಿ ರೂ. ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಪ್ರೋ ಎಂ ಜಿ ಭಟ್ಟ, ಯುವ ಮೋರ್ಚಾ ತಾಲೂಕಾಧ್ಯಕ್ಷ ಜಗದೀಶ ಭಟ್ಟ, ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಮೋಹಿನಿ ಗೌಡ, ಪ್ರಮುಖರಾದ ಅಶೋಕ ಪ್ರಭು, ಮಹಾಬಲ ಶೆಟ್ಟಿ, ನಿತ್ಯಾನಂದ, ಪ್ರಸಾದ ನಾಯ್ಕ, ಗಣೇಶ ಪಂಡಿತ, ವಿನಾಯಕ ಕೊಡ್ಲಕೆರೆ, ಬಿ.ಡಿ.ಪಟಗಾರ, ಕುಮಾರ ಕವರಿ ತೊರ್ಕೆ, ದೀಪಾ ಹಿಣಿ, ದತ್ತಾತ್ರೇಯ ಪಟಗಾರ, ಪಲ್ಲವಿ ಮಡಿವಾಳ, ಮಹಾದೇವಿ ಮುಕ್ರಿ, ಜಯಾ ಶೇಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.