ಯಲ್ಲಾಪುರ: ಸ್ವಾಮಿ ವಿವೇಕಾನಂದ ಸೇವಾ ಬಳಗ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಸಂಯುಕ್ತ ಆಶ್ರಯದಲ್ಲಿ ವನರಾಗ ಶರ್ಮಾ ಅವರ ಕೇದಗೆ ಪುಷ್ಪ (ಕವನ ಸಂಕಲನ) ಮತ್ತು ಏಳು ಮಲ್ಲಿಗೆ ರಾಜಕುಮಾರಿ (ಮಕ್ಕಳ ಕಥಾ ಸಂಕಲನ) ಲೋಕಾರ್ಪಣೆ ಮತ್ತು ಕವಿಗೋಷ್ಠಿ ನ.20ರಂದು ಎಪಿಎಂಸಿ ಆವಾರದ ಅಡಿಕೆಭವನದಲ್ಲಿ ನಡೆಯಲಿದೆ.
ಧಾರವಾಡದ ದ್ವಾರಪುರ ಸಂಸ್ಥಾನದ ಮಹಾರಾಜ ಪರಮಾತ್ಮಾಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ, ಕೇದಗೆ ಪುಷ್ಪ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಏಳುಮಲ್ಲಿಗೆ ರಾಜಕುಮಾರಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಗ್ರಾ.ಪಂ.ರಾ.ಗ್ರಾ.ಯೋ. ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಕೇಂದ್ರ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ, ಕ.ಸಾ.ಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಲೇಖಕ ಹಾಗೂ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀಮಾತಾ ಸೌಹಾರ್ದ ಉಮ್ಮಚಗಿ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬಿಗುಡ್ಡೆ, ಸರ್ವೋದಯ ಶಿಕ್ಷಣ ಸಮಿತಿ ವಜ್ರಳ್ಳಿ ಅಧ್ಯಕ್ಷ ಡಿ.ಶಂಕರ ಭಟ್, ಪುಸ್ತಕದ ಮುಖಪುಟ ಕಲಾವಿದ ಸತೀಶ ಯಲ್ಲಾಪುರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕವಯಿತ್ರಿ ಮುಕ್ತಾ ಶಂಕರ್ ಕೃತಿ ಪರಿಚಯಿಸಲಿದ್ದಾರೆ. ನಂತರ ಕವಿಗೋಷ್ಠಿ ನಡೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಬಳಗದ ಉಪಾಧ್ಯಕ್ಷ ಜಿ.ಎನ್.ಕೋಮಾರ್, ಕಾರ್ಯದರ್ಶಿ ದತ್ತಾತ್ರೇಯ ಕಣ್ಣಿಪಾಲ್, ಕರ್ನಾಟಕ ಜರ್ನಲಿಸ್ಟ್ ಯುನಿಯನ್ ತಾಲೂಕಾ ಅಧ್ಯಕ್ಷ ಟಿ.ಶಂಕರ ಭಟ್ ತಿಳಿಸಿದ್ದಾರೆ.