ಕಾರವಾರ: ಸರ್ಕಾರ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಮಾಜದ ಏಳಿಗೆಗೆ ಅನೇಕ ಯೋಜನೆಗಳನ್ನು ನೀಡಿದ್ದು, ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ನಗರದ ಪ್ರಿಮಿಯರ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡರದ ಉತ್ತರಕನ್ನಡ ಜಿಲ್ಲಾ ಗುನಗಿ ಸಮಾಜ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಮೇಲಕ್ಕೆ ಬರಬೇಕು ಎಂದರೆ ಎಲ್ಲರೂ ಶ್ರಮಿಸಬೇಕು. ಕಲಬುರ್ಗಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ 250 ಕ್ಕೂ ಹೆಚ್ಚು ಸಮಾಜದವರು ಪಾಲ್ಗೊಂಡಿದ್ದರು. ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಗುನಗಿ ಸಮಾಜದ ಸಭಾಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನವನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ಬೇಕಿದ್ದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಲಾಗುವುದು. ಶೀಘ್ರದಲ್ಲಿ ಈ ಸಮಾಜ ಭವನ ನಿರ್ಮಾಣವಾಗಲಿ ಎಂದು ಹಾರೈಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮೇಲಕ್ಕೆ ಬರಬೇಕು ಯಾವುದೇ ಬೇಧಭಾವ ಬರಬಾರದು. ಶಿಕ್ಷಣದಲ್ಲಿ ನಿರಂತರವಾಗಿ ಸಾಧನೆ ಮಾಡುವಂತಾಗಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜದ ಗಣ್ಯವ್ಯಕ್ತಿಯಾಗಿ ಬದುಕುಬೇಕು. ಸಮಾಜದ ಏಳಿಗೆಗೆ ಎಲ್ಲರೂ ಒಗ್ಗಟಾಗಿರಬೇಕು. ಹೀಗಿದ್ದಾಗ ಯಾವುದೇ ಸಮಸ್ಯೆ, ಕಷ್ಟ ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಹನಿ ಹನಿ ಗೂಡಿ ಹಳ್ಳ ಎಂಬಂತೆ ಎಲ್ಲರೂ ಒಗ್ಗಟಾಗಿದ್ದರೆ ಸಮಾಜವೂ ಬೆಳೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಗುನಗಿ ಸಮಾಜದ ಮಹಿಳೆಯರು ಶಾಸಕರಿಗೆ ಉಡಿಯನ್ನು ನೀಡಿದರು. ಹಾಗೂ ಸಮಾಜದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರವಾರ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಸ್ ಗುನಗಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪ್ರಕಾಶ ಗುನಗಿ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರದೀಪ ಗುನಗಿ, ಸಮಾಜದ ಪ್ರಮುಖರಾದ ರಾಮದಾಸ ಗುನಗಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.