ಯಲ್ಲಾಪುರ: ಪ್ರತಿ ವರ್ಷ ರಾಜ್ಯ ಸರಕಾರ ನೀಡುವ ಸಹಕಾರ ರತ್ನ ಪ್ರಶಸ್ತಿಯು ತಾಲೂಕಿನ ಆರ್.ಎನ್.ಹೆಗಡೆ ಗೋರ್ಸಗದ್ದೆ ಹಾಗೂ ಹೊನ್ನಾವರದ ವಿ.ಎನ್. ಭಟ್ಟ ಅಳ್ಳಂಕಿ ಅವರಿಗೆ ಲಭಿಸಿದೆ. ಆರ್.ಎನ್. ಹೆಗಡೆ ಐವತ್ತು ವರ್ಷಗಳಿಂದ ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಮ್.ಎ. ಪದವಿದರರಾದ ಇವರು ಯಲ್ಲಾಪುರದ ಪ್ರಸಿದ್ಧ ಮಾರ್ಕೆಟಿಂಗ್ ಹಾಗೂ ಹಾಸಣಗಿಯ ಸೊಸೈಟಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘಕ್ಕೆ ಹೊಸ ಕಟ್ಟಡ ನಿರ್ಮಿಸಿದ್ದರು. ಮಂಚಿಕೇರಿ ಶ್ರೀ ರಾಜ-ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ದಶಕಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದ ಹೆಗ್ಗಳಿಕೆ ಇವರದ್ದು.
ಸರಳ ಸ್ವಭಾವದ ಇವರು ಎಲ್ಲರೊಂದಿಗೂ ಬೆರೆಯುವ ಗುಣ ಎಲ್ಲರೂ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಅವಧಿಯಲ್ಲಿ ಅನೇಕ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಟ್ಟಿದ್ದರು. ಒಮ್ಮೆ ಅಂಕೋಲಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಯಲ್ಲಾಪುರ, ಅಂಕೋಲಾ, ಜೊಯಿಡಾ, ಹಳಿಯಾಳ ತಾಲೂಕಿನಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
ಅವರಿಗೆ ಪ್ರಶಸ್ತಿ ದೊರಕಿದ ಬಗ್ಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ತಿನ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮೋದ ಹೆಗಡೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆ, ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾದ ವಿ. ಎನ್. ಭಟ್ ಅಳ್ಳಂಕಿ ಅವರು ಜಿಲ್ಲಾ ಸಹಕಾರಿ ಯೂನಿಯನ್, ಹೊನ್ನಾವರ ಪಿಎಲ್‌ಡಿ ಬ್ಯಾಂಕ್ ಮತ್ತು ಹೆರಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.