ಸಿದ್ದಾಪುರ : ಗ್ರಾಮೀಣ ಮಟ್ಟದಲ್ಲಿ ಇರುವಂತಹ ಯುವ ಪ್ರತಿಭೆಗಳಿಗೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸಗಳು ಪ್ರತಿಗ್ರಾಮದಲ್ಲಿ ಆಗಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ನೀಡಗೋಡ ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 6 ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಮಾದರಿಯ ಕಬಡ್ಡಿ ಪಂದ್ಯಾವಳಿ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಶಂಭುಲಿಂಗೇಶ್ವರ ಗೆಳೆಯರ ಬಳಗದ ಯುವಕರು ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯನ್ನು ಈ ಸುಂದರ ವಾತಾವರಣದಲ್ಲಿ ಆಯೋಜಿಸಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಟಗಾರರಿಗೆ ಕರೆಸಿ ಅವರ ಪ್ರತಿಭೆಗಳನ್ನು ಕೂಡ ಗುರುತಿಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು. ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ತನ್ನದೇ ಆದಂತಹ ಮಹತ್ವವನ್ನು ಪಡೆದುಕೊಂಡಿದೆ ಕೇವಲ ಅವರು ಓದಿನೊಂದಿಗೆ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂಬಂತಹ ಸ್ಥಿತಿ ಈಗ ಇಲ್ಲ ಕ್ರೀಡೆಯಲ್ಲಿಯೂ ಕೂಡ ಉತ್ತಮ ಸಾಧನೆ ಮಾಡಿ ಇದು ರಾಜ್ಯ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕೀರ್ತಿ ಮತ್ತು ಗೌರವವನ್ನು ಸಂಪಾದಿಸುವ0ತಹ ಕೆಲಸಗಳಾಗುತ್ತವೆ. ಈ ಕಬಡ್ಡಿ ಕ್ರೀಡೆ ಕೇವಲ ಗ್ರಾಮೀಣ ಮಟ್ಟದಲ್ಲಿ ಉಳಿದುಕೊಂಡಿಲ್ಲ ಇದೀಗ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ವಿಶೇಷ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ಈ 6 ನೇ ವರ್ಷದ ಶ್ರೀ ಶಂಭುಲಿಂಗೇಶ್ವರ ಗೆಳೆಯರ ಬಳಗ ಆಯೋಜಿಸಿದ ಪಂದ್ಯಾವಳಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ್ದ ತಂಡಗಳು ಹೊನಲು ಬೆಳಕಿನ ಪಂದ್ಯದಲ್ಲಿ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಸಾವಿರಾರು ಮಂದಿ ಪ್ರೇಕ್ಷಕರು ಪಾಲ್ಗೊಂಡು ರಾತ್ರಿಯ ವೇಳೆಯೂ ಕೂಡ ಕುಳಿತುಕೊಂಡು ಕಬ್ಬಡಿಯ ಪಂದ್ಯಾವಳಿಯ ರಸದೌತಣವನ್ನು ಸವಿದರು.
ಈ ಸಂದರ್ಭದಲ್ಲಿ ಗಣೇಶ್ ಕೆ. ನಾಯ್ಕ, ಹರೀಶ್ ನಾಯ್ಕ, ಮನೋಜ್ ವಿ. ನಾಯ್ಕ, ಆದರ್ಶ ನಾಯ್ಕ ಹಾಗೂ ಊರಿನ ಪ್ರಮುಖರು ಹಾಗೂ ಅಪಾರ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಉಪಸ್ಥಿತರಿದ್ದರು